ತಕ್ಷಣಕ್ಕೆ 3,454 ಕೋಟಿ ರೂ. ಬಿಡುಗಡೆ
ಬೆಂಗಳೂರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ 3,454 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಷ್ಟ್ರದ ಇತಿಹಾಸದಲ್ಲೇ ಪರಿಹಾರ ಕೋರಿ ಸರ್ಕಾರವೊಂದು ಸುಪ್ರೀಂಕೋರ್ಟ್‌ನ ಮೊರೆ ಹೋಗಿತ್ತು, ನ್ಯಾಯಾಲಯ ಮಧ್ಯೆ ಪ್ರವೇಶಿಸುತ್ತಿದ್ದಂತೆ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ರೈತರಿಗೆ ಬೆಳೆ ಪರಿಹಾರ
ಈ ಮೂಲಕ ಕರ್ನಾಟಕ ಸರ್ಕಾರದ ಹೋರಾಟಕ್ಕೆ ಜಯ ದೊರೆತಂತಾಗಿದೆ, ತಾತ್ಕಾಲಿಕವಾಗಿ ಬರದ ನಡುವೆಯೂ ರೈತರಿಗೆ ಒಂದಷ್ಟು ಬೆಳೆ ಪರಿಹಾರ ದೊರೆಯಲಿದೆ.
ಕರ್ನಾಟಕದ ಜೊತೆಗೆ ತಮಿಳುನಾಡಿನಲ್ಲಿ ಉಂಟಾಗಿದ್ದ ನೆರೆ ಮತ್ತು ಅತಿವೃಷ್ಠಿಗೂ ಕೇಂದ್ರ ಆರ್ಥಿಕ ನೆರವು ಕೊಟ್ಟಿದೆ.
ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರಾಜ್ಯದ ಬಹುತೇಕ ಭಾಗ ಬರಕ್ಕೆ ಸಿಲುಕಿ ರೈತರು ಕೋಟ್ಯಂತರ ರೂ. ಮೌಲ್ಯದ ಬೆಳೆ ಕಳೆದುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಮನವಿ
ಕೃಷಿಕನ ಕೈಹಿಡಿಯಲು ಹಾಗೂ ಬರ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್‌ನಿಂದ 18,171 ಕೋಟಿ ರೂ. ಬರ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಿತ್ತು.
ಇದರಲ್ಲಿ ಬೆಳೆ ನಷ್ಟಕ್ಕಾಗಿ 4663.12 ಕೋಟಿ ರೂ., ಕುಡಿಯುವ ನೀರು ಹಾಗೂ ಮೇವಿಗೆ 566.78 ಕೋಟಿ ರೂ. ಹಾಗೂ ಬರದ ತೀವ್ರತೆಗೆ ಗುರಿಯಾದ ಕುಟುಂಬಗಳಿಗೆ ನೆರವು ಒದಗಿಸಲು 12,577.9 ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.
ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಏಳು ತಿಂಗಳು ಕಳೆದರೂ ಪರಿಹಾರ ನೀಡಿರಲಿಲ್ಲ, ಮತ್ತೊಂದೆಡೆ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಕಾನೂನಿನ ಸಮರಕ್ಕೆ ತೀರ್ಮಾನ ಕೈಗೊಂಡು ಸುಪ್ರೀಂಕೋರ್ಟ್‌ನ ಮೊರೆ ಹೋಯಿತು.
ಕೇಂದ್ರ ಚುನಾವಣಾ ಆಯೋಗ ಸಮ್ಮತಿ
ಕರ್ನಾಟಕದ ಮನವಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುತ್ತಿದ್ದಂತೆ ಮಧ್ಯೆ ಪ್ರವೇಶಿಸಿದ ಕೇಂದ್ರ ಸರ್ಕಾರ, ಬರ ಪರಿಹಾರ ಮಂಜೂರಾತಿಗೆ ಕೇಂದ್ರ ಚುನಾವಣಾ ಆಯೋಗ ಸಮ್ಮತಿಸಿದೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿತು.
ಈ ಹಿನ್ನೆಲೆಯಲ್ಲಿ ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಈ ತಿಂಗಳ 29ಕ್ಕೆ ಮುಂದೂಡಿತು. ಈ ನಡುವೆ ಕೇಂದ್ರ ಸರ್ಕಾರ ಬರ ಪರಿಹಾರ ಮೊತ್ತವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ.