ಕಲಬುರಗಿ:ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನಗಳು ಲಭಿಸಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮತದಾನದ ನಂತರ ನಮ್ಮ ಪಕ್ಷದ ಅಭ್ಯರ್ಥಿಗಳು, ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ವರದಿ ಆಧಾರದ ಮೇಲೆ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರು.
ಐದು ಗ್ಯಾರಂಟಿ ನಮ್ಮ ಕೈಹಿಡಿದಿದೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಭರವಸೆಗಳನ್ನು ಕಾಲಮಿತಿಯಲ್ಲಿ ಅನುಷ್ಟಾನಗೊಳಿಸಿದ್ದು ಲೋಕಸಭಾ ಚುಣಾವಣೆಯಲ್ಲಿ ನಮ್ಮ ಕೈಹಿಡಿದಿದೆ ಎಂದು ನಂಬಿದ್ದೇನೆ.
ನಮ್ಮ ಗ್ಯಾರಂಟಿ ಹಾಗೂ ಕೇಂದ್ರ ಸರ್ಕಾರದ ಒಡೆದು ಆಳುವ ನೀತಿ ಜನರಿಗೆ ಮನದಟ್ಟಾಗಿ ಈ ಬಾರಿ ಮತದಾರರು ನಮ್ಮ ಕೈಹಿಡಿದಿದ್ದಾರೆ.
ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಿಗೆ ಮೇ 7ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಇಲ್ಲಿಯೂ ನಮ್ಮ ಅಭ್ಯರ್ಥಿಗಳೇ ಮೇಲುಗೈ ಸಾಧಿಸುತ್ತಾರೆ.
ರಾಹುಲ್ ಗಾಂಧಿ ಬಿರುಸಿನ ಪ್ರಚಾರ
ಮೊದಲ ಹಂತದ ಚುನಾವಣೆ ನಂತರ ಎರಡನೇ ಹಂತದ ಕಡೆ ನಾವು ಗಮನ ಹರಿಸಿದ್ದೇವೆ, ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಬಿರುಸಿನ ಪ್ರಚಾರ ಮಾಡಿದ್ದಾರೆ.
ನಮ್ಮ ಪಕ್ಷದ ಮುಖಂಡರು ಹಾಗೂ ಸಚಿವರುಗಳು ಒಗ್ಗಟ್ಟಿನಿಂದ ಕೆಲಸ ಮಾಡಿ ಸರ್ಕಾರದ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ, ಇದು ನಮ್ಮ ಕೈಹಿಡಿಯಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ 10 ವರ್ಷಗಳ ವೈಫಲ್ಯ ಹಾಗೂ ನಮ್ಮ ಸರ್ಕಾರದ ಸಾಧನೆಗಳನ್ನು ಪ್ರಮುಖ ವಿಷಯವಾಗಿ ಚುನಾವಣೆಯಲ್ಲಿ ಪ್ರಸ್ತಾಪ ಮಾಡುತ್ತಿದ್ದೇವೆ, ಜನರು ಆಸಕ್ತಿಯಿಂದ ನಮ್ಮ ಮಾತುಗಳನ್ನು ಆಲಿಸಿ, ಉತ್ಸಾಹ ತೋರುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ
ನರೇಂದ್ರ ಮೋದಿ ಅವರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಂವಿಧಾನ ತಿದ್ದುಪಡಿ ಮಾಡಿ ಅವರಿಗೂ 10% ಮೀಸಲಾತಿ ನೀಡಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿರುವ ಮೂಲ ಸಂವಿಧಾನದಲ್ಲಿ ಅದು ಇಲ್ಲ, ಆದರೂ ಸಂವಿಧಾನ ತಿದ್ದುಪಡಿ ಮಾಡಿ ಮೀಸಲಾತಿ ನೀಡಿದೆ.
ಹಿಂದುಳಿದವರಿಗೆ ನೀಡಲಾದ ಮೀಸಲಾತಿ ರದ್ದುಪಡಿಸಿ ಮುಸಲ್ಮಾನರಿಗೆ ನೀಡಲಾಗುತ್ತದೆ ಎಂಬುದು ಅಪ್ಪಟ ಸುಳ್ಳು, ರಾಜಕೀಯವಾಗಿ ಬಿಜೆಪಿಯವರು ಈ ರೀತಿ ಹೇಳುತ್ತಿದ್ದಾರೆ, ಮತಗಳನ್ನು ಧ್ರುವೀಕರಣ ಮಾಡುವ ಉದ್ದೇಶದಿಂದ ಮೋದಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಸ್ಥಾನಕ್ಕೆ ಇದು ಶೋಭೆ ತರುವುದಿಲ್ಲ.
ಎಲ್ಲ ಭಾರತೀಯರ ರಕ್ಷಣೆ ಮಾಡುವುದು ಪ್ರಧಾನಮಂತ್ರಿಗಳ ಕರ್ತವ್ಯ, ಮುಸಲ್ಮಾನರನ್ನು ಪ್ರತ್ಯೇಕಿಸಿ ಮತಗಳ ಧ್ರುವೀಕರಣ ಮಾಡುತ್ತಿರುವ ಮೋದಿ ಅವರ ಕಾರ್ಯ ಸಂವಿಧಾನ ಬಾಹಿರವಾದುದು.
ಮೀಸಲಾತಿ ನೀಡಿಕೆ ಸಂವಿಧಾನಿಕವಾಗಿ ಸರಿಯೆಂದು ಸುಪ್ರೀಂಕೋರ್ಟ್ ತಿಳಿಸಿದ್ದರೂ, ಮೋದಿ ಅವರು ಹತಾಶೆಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಮೀಸಲಾತಿ ವಿರೋಧಿಸುವ ಬಿಜೆಪಿಯವರ ಧೋರಣೆಯನ್ನು ಖಂಡಿಸುತ್ತೇನೆ, ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದು ಸರಿಯಲ್ಲ ಎಂದರು.