ಪಿತ್ತ ನಿವಾರಣೆಗೆ, ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ
ಎಲ್ಲಾ ಕಾಲಕ್ಕೂ ಆರೋಗ್ಯದ ಬಗ್ಗೆ ಗಮನಹರಿಸುವುದು ಸೂಕ್ತ ಹಾಗೂ ಅಗತ್ಯ ಕೂಡ. ಅಧಿಕ ಕೆಲಸದೊತ್ತಡದ ನಡುವೆ ಜಡಗಟ್ಟಿದ ಜೀವನ ಶೈಲಿಯು ಮನುಷ್ಯರನ್ನು ಅನಾರೋಗ್ಯವಂತರನ್ನಾಗಿಸುತ್ತಿದೆ. ಸಮಯದ ಅಭಾವದಿಂದಲೋ, ಆಲಸ್ಯದಿಂದಲೋ ಯೋಗ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆಯಾಗುತ್ತಿದೆ. ಅಂಥವರು ಯೋಗದಲ್ಲಿನ ಮುದ್ರೆಗಳನ್ನು ಹಾಗೂ ಪ್ರಾಣಾಯಾಮಗಳನ್ನು ಸತತವಾಗಿ ಅಭ್ಯಾಸ ಮಾಡುವುದರಿಂದ ಉತ್ತಮ ಜೀವನ ಶೈಲಿಯನ್ನು ತಮ್ಮದಾಗಿಸಿಕೊಳ್ಳಬಹುದು.
ಮುಖ್ಯವಾಗಿ ಕೈ ಸನ್ನೆಗಳನ್ನು ಅಥವಾ ಹಸ್ತಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸಹಾಯವಾಗುತ್ತದೆ. ಮುದ್ರೆಗಳಲ್ಲಿ ಮುಖ್ಯವಾಗಿ ಉಸಿರಾಟದ ಮೇಲೆ ನಿಯಂತ್ರಣವಿರಬೇಕು. ಇದರಿಂದಾಗಿ ದೇಹದಲ್ಲಿರುವ ಗಂಟುಗಳನ್ನು, ನೋವುಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ ಪ್ರಾಣ ಮುದ್ರೆಯನ್ನು ನೋಡೋಣ.
ಪ್ರಾಣಮುದ್ರೆಯು ಹಸ್ತಮುದ್ರೆಯಾಗಿದ್ದು, ಜೀವಶಕ್ತಿ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ. ಇದು ಮೂಲಾಧಾರ ಚಕ್ರವನ್ನು ಪ್ರಚೋದಿಸುವ ಮೂಲಕ ನರಮಂಡಲ ಮತ್ತು ಚಕ್ರಗಳ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ. ಭೂಮಿ ಮತ್ತು ನೀರಿನ ಅಂಶವನ್ನು ಒಳಗೊಂಡ ಪ್ರಾಣಮುದ್ರೆಯು ಬೆಂಕಿಯ ಅಂಶವನ್ನು ದೇಹದಲ್ಲಿ ಕಡಿಮೆ ಮಾಡುತ್ತದೆ. ದೇಹದಲ್ಲಿ ಪಿತ್ತದ ಅಂಶವನ್ನು ಕಡಿಮೆ ಮಾಡಲು ಈ ಮುದ್ರೆಯು ಸಹಾಯಕವಾಗುತ್ತದೆ.
ಪ್ರಾಣಮುದ್ರೆಯನ್ನು ಮಾಡುವುದು ಹೇಗೆ?
ನೆಲದ ಮೇಲೆ ಅಥವಾ ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಕೊಠಡಿಗೆ ಚೆನ್ನಾಗಿ ಗಾಳಿ ಮತ್ತು ಬೆಳಕು ಬರುವಂತಿರಲಿ. ಮುದ್ರೆಯನ್ನು ಅಭ್ಯಾಸ ಮಾಡುವಾಗ ಮನಸ್ಸು ಶಾಂತವಾಗಿರಲಿ. ನಿಮ್ಮ ಕೈಗಳನ್ನು ತೊಡೆಯ ಮೇಲಿರಿಸಿ. ಅಂಗೈಗಳು ಆಕಾಶವನ್ನು ನೋಡುತ್ತಿರಲಿ. ಉಂಗುರ ಮತ್ತು ಕೊನೆಯ ಬೆರಳನ್ನು ಹೆಬ್ಬೆರಳಿನ ತುದಿಯಿಂದ ಸ್ಪರ್ಶಿಸಬೇಕು.
ಹೆಬ್ಬೆರಳು ಬೆಂಕಿಯ ಅಂಶವನ್ನು ಸಂಕೇತಿಸುತ್ತದೆ. ಉಂಗುರದ ಬೆರಳು ಭೂಮಿಯ ಅಂಶವನ್ನು ಸಂಕೇತಿಸಿದರೆ, ಕಿರು ಬೆರಳು ನೀರಿನ ಸಂಕೇತವನ್ನು ಪ್ರತಿನಿಧಿಸುವುದು. ತೋರು ಬೆರಳು ಹಾಗೂ ಮಧ್ಯದ ಬೆರಳು ನೇರವಾಗಿ ವಿಸ್ತರಿಸಿರಲಿ. ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ. ಎರಡೂ ಕೈಗಳನ್ನು ಪ್ರಾಣಮುದ್ರೆಯಲ್ಲಿ ಇರಿಸಿ, ಭುಜ ಮತ್ತು ಕುತ್ತಿಗೆ ನೇರವಾಗಿದ್ದು, ವಿಶ್ರಾಂತ ಸ್ಥಿತಿಯಲ್ಲಿರಬೇಕು. 15ರಿಂದ 20 ನಿಮಿಷಗಳ ಕಾಲ ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು.
ಪ್ರಾಣಮುದ್ರೆಯು ದೇಹದಲ್ಲಿನ ಸುಪ್ತಶಕ್ತಿಯನ್ನು ಸಕ್ರಿಯಗೊಳಿಸುವುದು. ಆದ್ದರಿಂದ ಇದನ್ನು ಜೀವಶಕ್ತಿಯ ಮುದ್ರೆ ಎಂದು ಕರೆಯಲಾಗುವುದು. ಈ ಮುದ್ರೆಯು ಭರತನಾಟ್ಯದಲ್ಲಿ ಕರ್ತಾರಿಮುಖ ಹಸ್ತಮುದ್ರೆಯನ್ನು ಹೋಲುತ್ತದೆ. ಕಥಕ್ ನೃತ್ಯದಲ್ಲಿ ನವಿಲನ್ನು ಸೂಚಿಸಲು ಪ್ರಾಣಮುದ್ರೆಯನ್ನು ಬಳಸಲಾಗುತ್ತದೆ.
ಪ್ರಾಣಮುದ್ರೆಯ ಪ್ರಯೋಜನಗಳು
ರೋಗ ನಿರೋಧಕ ಶಕ್ತಿಗಾಗಿ ಪ್ರಾಣಮುದ್ರೆಯನ್ನು ಬಳಸಲಾಗುವುದು. ಕೋವಿಡ್-19ರ ಸಾಂಕ್ರಾಮಿಕ ಸೋಂಕಿನ ನಂತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಮುದ್ರೆಯನ್ನು ಹೆಚ್ಚು ಅಭ್ಯಾಸ ಮಾಡಲಾಗುತ್ತಿದೆ. ನಿಯಮಿತ ಅಭ್ಯಾಸದಿಂದ ದೃಷ್ಟಿ ದೋಷ ನಿವಾರಣೆಯಾಗಲಿದೆ. ಶ್ವಾಸದಕೋಶದ ಕಾರ್ಯವನ್ನು ವೃದ್ಧಿಸಲಿದೆ. ಹೃದಯದ ಕಾರ್ಯ ನಿರ್ವಹಣೆಗೆ ಸಹಾಯ ಮಾಡಲಿದೆ. ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ತಲುಪಿಸಲು ಹಾಗೂ ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಸರಿಯಾದ ರೀತಿಯ ರಕ್ತ ಪರಿಚಲನೆಗೆ ನಿಯಮಿತವಾಗಿ ಈ ಮುದ್ರೆಯನ್ನು ಅಭ್ಯಾಸ ಮಾಡಬೇಕಾಗುತ್ತದೆ. ಅತಿಯಾದ ವ್ಯಾಯಾಮದಿಂದ ದೇಹದಲ್ಲಿನ ನಿರ್ಜಲೀಕರಣದಿಂದ ಉಂಟಾಗುವ ಸ್ನಾಯುಗಳಲ್ಲಿನ ಸೆಳೆತವನ್ನು ತೊಡೆದು ಹಾಕಲು ಪ್ರಾಣಮುದ್ರೆಯು ಸಹಾಯಕವಾಗಿರುತ್ತದೆ. ದೇಹದಲ್ಲಿನ ಯಾವುದೇ ಭಾಗವು ಮರಗಟ್ಟುವಿಕೆಯನ್ನು ನಿಯಂತ್ತಿಸಲಿದೆ.
ಮಾನಸಿಕ ನೆಮ್ಮದಿಗಾಗಿ ಈ ಮುದ್ರೆಯು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇದು ಮಾನಸಿಕ ಒತ್ತಡ, ಕೋಪ, ಅಸೂಯೆ, ಹೆಮ್ಮೆ, ಚಡಪಡಿಕೆ ಮತ್ತು ಕಿರಿ ಕಿರಿಯನ್ನು ಹೋಗಲಾಡಿಸಲು ಸಹಾಯ ಮಾಡುವುದು. ವಿಶೇಷವಾಗಿ ಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವುಗಳನ್ನು ಶಮನ ಮಾಡಲು ಪ್ರಾಣಮುದ್ರೆಯು ಪ್ರಯೋಜನಕಾರಿಯಾಗಿದೆ.
ಪ್ರಾಣಮುದ್ರೆಯ ಅಡ್ಡ ಪರಿಣಾಮಗಳು
ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ, ಈ ಮುದ್ರೆ ಮಾಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅವಶ್ಯಕ. ಒಂದೇ ಭಂಗಿಯಲ್ಲಿ ಕುಳಿತು ಮುದ್ರೆಯನ್ನು ಅಭ್ಯಾಸ ಮಾಡದಿರಿ. ನುರಿತ ಯೋಗ ತರಬೇತಿದಾರರ ಸಲಹೆಯಂತೆ ಕಡಿಮೆ ಅವಧಿಯಲ್ಲಿ ಅಭ್ಯಾಸವನ್ನು ಮುಂದುವರೆಸಿ. ನೀವು ದೀರ್ಘ ಕಾಲದವರೆಗೆ ಪ್ರಾಣಮುದ್ರೆಯನ್ನು ಅಭ್ಯಾಸ ಮಾಡಿದರೆ ದಡೂತಿ ದೇಹಿಗಳಾಗಬಹುದು.
ಈ ಮುದ್ರೆಯು ಬೆಂಕಿಯನ್ನು ಅಂಶವನ್ನು ನಿಧಾನಗೊಳಿಸುವುದರಿಂದ, ಕಫದ ಅಂಶವನ್ನು ಹೆಚ್ಚಿಸುವುದರಿಂದ, ಗಂಟೆಗಳ ಕಾಲ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ತೂಕವನ್ನು ಹೆಚ್ಚಿಸಲಿದೆ. ರಾತ್ರಿಯ ವೇಳೆ ಅಭ್ಯಾಸ ಮಾಡಿದರೆ, ನಿದ್ರಾಹೀನತೆಯ ಸಮಸ್ಯೆ ಕಾಡಲಿದೆ. ಬೆನ್ನಿಗೆ ಸಂಬಂಧಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಪ್ರಾಣಮುದ್ರೆ ಮಾಡುವುದನ್ನು ತಪ್ಪಿಸಬೇಕು. ಪ್ರಾಣಾಯಾಮದೊಂದಿಗೆ ಈ ಮುದ್ರೆಯನ್ನು ಮಾಡುತ್ತಿದ್ದರೆ, ಆರಾಮದಾಯಕ ಬಟ್ಟೆಗಳನ್ನು ಧರಿಸಿರಬೇಕು.
ಒಟ್ಟಿನಲ್ಲಿ ಪ್ರಾಣಮುದ್ರೆಯನ್ನು ಚಿಕಿತ್ಸಕವಾಗಿ, ಗುಣಪಡಿಸುವ ಸಾಧನವಾಗಿ ಬಳಸಬಹುದು. ಆಯುರ್ವೇದದ ಪ್ರಕಾರ ಈ ಮುದ್ರೆಯು ಕಫದೋಷವನ್ನು ಹೆಚ್ಚಿಸಿದರೆ, ಪಿತ್ತದೋಷವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಕಫ ಪ್ರಕೃತಿಯುಳ್ಳವರು ಈ ಮುದ್ರೆಯ ಅಭ್ಯಾಸ ಮಾಡಬಾರದು.