ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್‌ನಿಂದ ಅಮಾನತ್ತು ಆಗಲಿದ್ದಾರೆ.
ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಜೆಡಿಎಸ್ ಸಂಸದರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ತುರ್ತು ಕೋರ್ ಕಮಿಟಿ ಸಭೆ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸಲಹೆಯಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಜ್ವಲ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ನಾಳೆ ಹುಬ್ಬಳ್ಳಿಯಲ್ಲಿ ತುರ್ತು ಕೋರ್ ಕಮಿಟಿ ಸಭೆ ಕರೆದಿದ್ದಾರೆ.
ಮಾಜಿ ಸಚಿವ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅಲ್ಲಿ ಪ್ರಜ್ವಲ್ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಮಾಡಿ, ಕ್ರಮದ ಕುರಿತು ನಿರ್ಧರಿಸಲಿದ್ದಾರೆ.
ಮೊದಲ ಹಂತದಲ್ಲಿ ನಡೆದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಮೈತ್ರಿಕೂಟ ಎಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಬಗ್ಗೆ ಸಭೆಯಲ್ಲಿ ಚಿಂತನ-ಮಂಥನ ನಡೆಯಲಿದೆ.
ಷಡ್ಯಂತ್ರ ಬಗ್ಗೆ ಚರ್ಚೆ
ಇದೇ ಸಂದರ್ಭದಲ್ಲಿ ಹಾಸನ ಲೋಕಸಭಾ ಚುನಾವಣೆಯ ಅಂತಿಮ ಘಟ್ಟದಲ್ಲಿ ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಅವರ ವಿರುದ್ಧ ಬಿಡುಗಡೆ ಮಾಡಿರುವ ಪೆನ್ ಡ್ರೈವ್, ಇದರ ಹಿಂದಿರುವ ಷಡ್ಯಂತ್ರ, ಎಲ್ಲದರ ಬಗ್ಗೆಯೂ ಚರ್ಚೆಯಾಗಲಿದೆ.
ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಕಳಂಕ ತರಲು ವಿರೋಧಿಗಳು ಯತ್ನಿಸುತ್ತಾರೆ.
ಸಂಸದರು ದೌರ್ಜನ್ಯದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವುದರಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಬಗ್ಗೆ ತೀರ್ಮಾನವಾಗಲಿದೆ.