ಬೆಂಗಳೂರು:ಲೂಟಿಗೆ ಮತ್ತೊಂದು ಹೆಸರೇ ಕಾಂಗ್ರೆಸ್, ಇಂತಹ ಪಕ್ಷದ ಕೈಯಲ್ಲಿ ದೇಶ ಕೊಡಲು ಸಾಧ್ಯವೇ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕರ್ನಾಟಕವನ್ನೂ ಲೂಟಿಯ ಎಟಿಎಂ ಮಾಡಿಕೊಂಡಿದೆ, ಆಡಳಿತಕ್ಕೆ ಬಂದ ಅತ್ಯಂತ ಕಡಿಮೆ ಸಮಯದಲ್ಲೇ ಸರ್ಕಾರಿ ಖಜಾನೆ ಖಾಲಿಯಾಗಿದೆ, ರಾಜ್ಯ ಸರಕಾರಿ ನೌಕರರಿಗೆ ವೇತನ ಕೊಡಲೂ ಸಾಧ್ಯವಾಗದ ಸ್ಥಿತಿ ಬರಲಿದೆ ಎಂದರು.
ಹಸಿವಿನಿಂದ ಒದ್ದಾಡುವ ಸ್ಥಿತಿ
ಮುಂದೆ ರಾಜ್ಯದ ಜನತೆಯ ಮಕ್ಕಳೂ ಹಸಿವಿನಿಂದ ಒದ್ದಾಡುವ ಸ್ಥಿತಿ ಬಂದೀತು ಎಂದು ಎಚ್ಚರಿಸಿದರು.
ಕೇಂದ್ರದ ಎನ್‌ಡಿಎ ಸರ್ಕಾರ ಕರ್ನಾಟಕದಲ್ಲಿ ಹಲವು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ, ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ, ಕಳೆದ 10 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ.
ವಂಚಿತ ವರ್ಗದ ಏಳಿಗೆಗೆ ಆದ್ಯತೆ ಕೊಟ್ಟಿದ್ದೇವೆ, ತಾವು ಅಧಿಕಾರಕ್ಕೆ ಬರುವ ಮೊದಲು ದೇಶದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ, ಈ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
11 ಕೋಟಿ ಮನೆಗಳಿಗೆ ನಲ್ಲಿ ನೀರು
ದೇಶದಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಜಲಜೀವನ್ ಮಿಷನ್ ಕಾರ್ಯಕ್ರಮ ಅನುಷ್ಠಾನ ಮಾಡಿದ್ದು, ಶೇ.75ಕ್ಕೂ ಹೆಚ್ಚು ಅಂದರೆ, 11 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲಾಗಿದೆ.
ಅಭಿವೃದ್ಧಿ ಎಂಬುದು ದೇಶದ ಎಲ್ಲ ಗ್ರಾಮಗಳನ್ನು ತಲುಪುತ್ತಿದೆ, ಎಸ್‌ಸಿ, ಎಸ್‌ಟಿ ಸಮುದಾಯ ಅಭಿವೃದ್ಧಿ ವಂಚಿತವಾಗಿತ್ತು, ಗ್ಯಾಸ್ ಸಿಲಿಂಡರ್‌ಗಳನ್ನು ನೀಡಿದ್ದು, ಎಸ್‌ಸಿ, ಎಸ್‌ಟಿ ಒಬಿಸಿ ಸಮುದಾಯದವರಿಗೆ ಗರಿಷ್ಠ ಪ್ರಯೋಜನ ಲಭಿಸಿದೆ ಎಂದರು.
ಯಡಿಯೂರಪ್ಪ ಅವರು ರೈತರಿಗೆ ನೆರವಾದವರು, ನಾವು ಇಥೇನಾಲ್ ಮೂಲಕ ರೈತರಿಗೆ ನೆರವಾಗಿದ್ದೇವೆ.
ಕರ್ನಾಟಕದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್
ಕಾಂಗ್ರೆಸ್ಸಿಗೆ ಬಡವರ, ದಲಿತರ, ವಂಚಿತರ ಕಡೆ ಗಮನ ನೀಡಲು ಪುರುಸೊತ್ತಿಲ್ಲ, ಕರ್ನಾಟಕದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್ ನಡೆಸುತ್ತಿದೆ, ಭ್ರಷ್ಟಾಚಾರದ ಮೂಲಕ ವಸೂಲಿ ಮಾಡುವುದೇ ಇವರ ದಂಧೆಯಾಗಿದೆ.
ಟೆಕ್ ಹಬ್ ಎಂಬ ಖ್ಯಾತಿ ಗಳಿಸಿದ್ದ ಬೆಂಗಳೂರನ್ನು ಟ್ಯಾಂಕರ್ ಹಬ್ ಮಾಡಿದ್ದಾರೆ, ನೀರಿಗಾಗಿ ಟ್ಯಾಂಕರ್ ಮಾಫಿಯಾ ಮೂಲಕ ಕಾಂಗ್ರೆಸ್ ಕಮಿಷನ್ ಪಡೆಯುತ್ತಿದೆ.
ಕಾಂಗ್ರೆಸ್ಸಿಗರು 2ಜಿ ಹಗರಣದಂಥ ಭ್ರಷ್ಟಾಚಾರದ ದೊಡ್ಡ ಹಗರಣ ಮಾಡಲು ಕಾಯುತ್ತಿದ್ದಾರೆ, ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಮೋದಿ ಮನವಿ ಮಾಡಿದರು.
ದಲಿತರನ್ನು ವಂಚಿಸುವ ಹುನ್ನಾರ
ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಒಬಿಸಿ ಮೀಸಲಾತಿಯಡಿ ಅವಕಾಶ ಕೊಟ್ಟಿದ್ದಾರೆ, ದಲಿತರನ್ನು ವಂಚಿಸುವ ಹುನ್ನಾರವಿದು, ಧರ್ಮದ ಆಧಾರದಲ್ಲಿ ತಮ್ಮ ಮತಬ್ಯಾಂಕ್ ರಕ್ಷಿಸಲು ಮುಂದಾಗಿದ್ದಾರೆ.
ಎಸ್‌ಸಿ, ಎಸ್‌ಟಿ, ಒಬಿಸಿ ಸಂಸದರು ಹೆಚ್ಚಾಗಿ ಬಿಜೆಪಿಯಲ್ಲಿದ್ದಾರೆ, ಈ ಕಾರಣಕ್ಕೆ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ, ಕಾಂಗ್ರೆಸ್‌ನ ಇಂಥ ಹುನ್ನಾರ ಅನುಷ್ಠಾನಕ್ಕೆ ಮೋದಿ ಅವಕಾಶ ಕೊಡುವುದಿಲ್ಲ ಎಂದರು.
ವಿರೋಧ ಪಕ್ಷದವರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನನ್ನ ಧ್ವನಿಯಲ್ಲಿ ಡೀಪ್ ಫೇಕ್ (ನಕಲಿ) ವಿಡಿಯೋ ಮಾಡುತ್ತಿದ್ದಾರೆ, ಇಂಥ ವಿಡಿಯೋ ಕಂಡರೆ ನಮ್ಮ ಪಕ್ಷದವರ ಗಮನಕ್ಕೆ ತನ್ನಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಹುಬ್ಬಳ್ಳಿ ಘಟನೆ ಆತಂಕಕಾರಿ
ಯುವತಿಯನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ ಹುಬ್ಬಳ್ಳಿ ಘಟನೆ ಆತಂಕಕಾರಿಯಾಗಿದೆ, ಕಾಂಗ್ರೆಸ್ ಈ ಘಟನೆಯನ್ನು ಮತಬ್ಯಾಂಕ್‌ಗಾಗಿ, ತುಷ್ಟೀಕರಣಕ್ಕಾಗಿ ಪ್ರಮುಖ ವಿಚಾರವಾಗಿ ಪರಿಗಣಿಸುತ್ತಿಲ್ಲ.
ಹನುಮಾನ್ ಚಾಲೀಸ ಹಾಕಿದ ಅಂಗಡಿ ಮಾಲೀಕನ ಮೇಲೆ ಹಲ್ಲೆ ಆಗುತ್ತದೆ, ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದರೆ ಸಿಲಿಂಡರ್ ಸ್ಫೋಟ ಎಂದು ಸರ್ಕಾರದ ಪ್ರತಿನಿಧಿ ಹೇಳುತ್ತಾರೆ, ಇವೆಲ್ಲವೂ ಆತಂಕವಾದ, ಭಯೋತ್ಪಾದನೆಯ ಮಾನಸಿಕವಾದದ ಪ್ರತಿಬಿಂಬ, ಕಾಂಗ್ರೆಸ್ ಪಕ್ಷ ಮತಕ್ಕಾಗಿ ಇಂಥವರನ್ನು ಬೆಂಬಲಿಸುತ್ತದೆ, ದೇಶದ ನಿರ್ದೋಷಿ ನಾಗರಿಕರನ್ನು ಕೊಲ್ಲಲು ಬಯಸುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.
ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ ಮತ ಕೊಡಿ, 2024ರ ಚುನಾವಣೆಯು ವಿಕಸಿತ ಭಾರತದ ಸಂಕಲ್ಪ ಹೊಂದಿದ ಚುನಾವಣೆಯಾಗಿದೆ, ಆತ್ಮನಿರ್ಭರ ಭಾರತದ ಚುನಾವಣೆ.
ವಿಶ್ವದ 3ನೇ ಆರ್ಥಿಕ ಶಕ್ತಿ
ಭಾರತವು ವಿಶ್ವದ 3ನೇ ಪ್ರಮುಖ ಆರ್ಥಿಕ ಶಕ್ತಿಯಾಗಲು ಇದು ಪೂರಕ ಚುನಾವಣೆ, ನಿಮ್ಮ ಒಂದು ಮತ ಈ ಸಂಕಲ್ಪ ಸಾಧನೆಗೆ ಸಹಕಾರಿಯಾಗಲಿದೆ, ಮೋದಿಗೆ ಶಕ್ತಿ ಕೊಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಭಾರತವನ್ನು ಕೌಶಲ್ಯಯುಕ್ತ ದೇಶ, ಉತ್ಪಾದನಾ ಹಬ್ ಆಗಿ ಪರಿವರ್ತಿಸಲು ದೂರದೃಷ್ಟಿ ಬೇಕು, ಇದು ಮೋಜು ಮಾಡುವವರಿಂದ ಸಾಧ್ಯವಿಲ್ಲ, ಒಂದು ಸಂಕಲ್ಪಕ್ಕಾಗಿ 24 x 7 ಗಂಟೆ ಕೆಲಸ ಮಾಡುವವರ ಅಗತ್ಯವಿದೆ, ಮೋದಿಯ ದೂರದೃಷ್ಟಿ ಸ್ಪಷ್ಟವಾಗಿದೆ, ಮೋದಿಯ ಜೀವನವೂ ಸುಸ್ಪಷ್ಟವಾಗಿದೆ ಎಂದರು.
ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರ ನಿಧನ ದುಃಖದ ವಿಚಾರ, ನೈಜ ಜನಸೇವಕರೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ ಎಂದು ನುಡಿದರು.