ಹೆಣ್ಣು ಮಕ್ಕಳ ಮಾನ ಹರಾಜು ಮಾಡಿದ ಡಿಸಿಎಂ!
ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೊ ಪೆನ್ ಡ್ರೈವ್‌ಗಳನ್ನು ಸಾರ್ವಜನಿಕವಾಗಿ ವಿತರಿಸಿ ಹೆಣ್ಣು ಮಕ್ಕಳ ಮಾನ ಹರಾಜು ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ನಂತರ ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, ಈ ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಗೌರವ ನೀಡುವುದೇ ಆದರೆ, ಮೊದಲು ಈ ವ್ಯಕ್ತಿಯನ್ನು ವಜಾಗೊಳಿಸಿ, ಎಸ್‌ಐಟಿ ತನಿಖೆಯಲ್ಲಿ ಇದನ್ನೂ ಸೇರಿಸಿ ಎಂದು ಆಗ್ರಹಿಸಿದರು.
ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ
ಪ್ರಜ್ವಲ್ ರೇವಣ್ಣ ಅವರನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ, ಅವರು ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ, ಆದರೆ, ಸಿಡಿ ಮತ್ತು ಪೆನ್ ಡ್ರೈವ್ ಬಿಡುಗಡೆ ಸಂದರ್ಭದಲ್ಲಿ ಸಂತ್ರಸ್ತ ಹೆಣ್ಣು ಮಕ್ಕಳ ಮುಖವನ್ನಾದರೂ ಮುಚ್ಚಬೇಕಿತ್ತು, ಇದನ್ನೂ ಮಾಡದೆ ಸಾರ್ವಜನಿಕವಾಗಿ ಆ ಹೆಣ್ಣು ಮಕ್ಕಳ ಭವಿಷ್ಯ ಹಾಳು ಮಾಡಿದ್ದಾರೆ.
ಇದರಿಂದ ಯಾವುದೇ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದರು.
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು, ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಹಿನ್ನಡೆ ತರುವ ಹಾಗೂ ಪ್ರಧಾನಿ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು, ಕಾಂಗ್ರೆಸ್ ಮತ್ತು ಶಿವಕುಮಾರ್ ಮಾಡಿರುವ ಕುತಂತ್ರ ಎಂದು ಕಿಡಿಕಾರಿದರು.
ಡಿಕೆಶಿ ಸಹೋದರರ ಬಳಿ ಪೆನ್ ಡ್ರೈವ್
ಹಾಸನದ ವಕೀಲ ದೇವರಾಜೇಗೌಡ ಅವರು, ಪ್ರಜ್ವಲ್ ವಿರುದ್ಧ ಕಾನೂನು ಸಮರ ನಡೆಸುತ್ತಿದ್ದಾರೆ, ಅವರು ನಮ್ಮ ಪರ ಇಲ್ಲ, ಇಂತಹವರೇ ಶಿವಕುಮಾರ್ ಸಹೋದರರಿಗೆ ಈ ಪೆನ್ ಡ್ರೈವ್ ಎರಡು ತಿಂಗಳ ಹಿಂದೆಯೇ ತಲುಪಿತ್ತು ಎಂದು ಹೇಳಿಕೆ ನೀಡಿದ್ದಾರೆ.
ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಎರಡು ತಿಂಗಳ ಹಿಂದೆ ನನ್ನ ಬಳಿ ಬಂದು ಪೆನ್ ಡ್ರೈವ್‌ನಲ್ಲಿರುವ ನೀಲಿ ಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡದಂತೆ ಪ್ರಜ್ವಲ್ ತಡೆಯಾಜ್ಞೆ ತಂದಿದ್ದಾನೆ, ಇದನ್ನು ತೆರವುಗೊಳಿಸುವಂತೆ ಕೋರಿದ್ದರು.
ನಾನು ಪೆನ್ ಡ್ರೈವ್ ತೆಗೆದುಕೊಂಡು ಎಲ್ಲವನ್ನೂ ವೀಕ್ಷಿಸಿದಾಗ ಭಯಾನಕ ದೃಶ್ಯಗಳಿದ್ದವು, ಇದನ್ನು ಯಾರ‍್ಯಾರಿಗೆ ಕೊಟ್ಟದ್ದೀಯಾ ಎಂದು ಕೇಳಿದ್ದೆ, ಆಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿ ಕೆಲವು ಕಾಂಗ್ರಸ್ಸಿಗರಿಗೆ ನೀಡಿದ್ದೇನೆ ಎಂದು ಕಾರ್ತಿಕ್ ಹೇಳಿದ್ದ ಎಂದು ರಾಜೇಗೌಡರೇ ಬಹಿರಂಗ ಪಡಿಸಿದ್ದಾರೆ.
ಅವರು ಹೇಳಿರುವಂತೆಯೇ ಈ ಪೆನ್ ಡ್ರೈವ್‌ಗಳು ಮತ್ತು ಸಿಡಿಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಿ, ಈ ಮಹಾನ್ ನಾಯಕರು ಚುನಾವಣೆ ಸಂದರ್ಭದಲ್ಲಿ ಬಳಕೆ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಸತ್ಯಾಸತ್ಯತೆ ಹೊರಬರಲಿ
ಎಸ್‌ಐಟಿ ತನಿಖೆಯಾಗಲಿ ಸತ್ಯಾಸತ್ಯತೆ ಹೊರಬರಲಿ, ಆದರೆ ಪೆನ್ ಡ್ರೈವ್ ಮತ್ತು ಸಿಡಿಗಳನ್ನು ಸಾರ್ವಜನಿಕವಾಗಿ ಹಂಚುವ ಮೂಲಕ ಸಂತ್ರಸ್ತೆಯರ ಕುಟುಂಬವನ್ನು ಬೀದಿಗೆ ತಂದಿದ್ದಾರೆ, ಇದು ಒಂದು ದೊಡ್ಡ ಅಪರಾಧ.
ಹೆಣ್ಣು ಮಕ್ಕಳಿಗೆ ಸರ್ಕಾರ ಗೌರವ ಕೊಡುವುದೇ ಆದರೆ, ಶಿವಕುಮಾರ್ ಅವರನ್ನು ವಜಾ ಮಾಡಿ, ಇದನ್ನು ಬಹಿರಂಗ ಪಡಿಸಿದ ಪ್ರಕರಣವನ್ನೂ ತನಿಖೆ ನಡೆಸಿ ಎಂದು ಒತ್ತಾಯಿಸಿದರು.
ರೇವಣ್ಣ ಕಾರು ಚಾಲಕ ಕಾರ್ತಿಕ್, ಏತಕ್ಕೆ ಕೆಲಸ ಬಿಟ್ಟು ಹೋದ, ಅವನು ಏನು ಮಾಡಿದ್ದ ಎಂಬುದೂ ಬಹಿರಂಗಗೊಳ್ಳಬೇಕು, ಅದನ್ನೂ ತನಿಖಾ ವ್ಯಾಪ್ತಿಗೆ ತನ್ನಿ ಎಂದರು.
ಹೆಣ್ಣು ಮಕ್ಕಳ ಮಾನ ಹೋಗಿದೆ ಎಂದು ನಮ್ಮ ಮನೆ ಮುಂದೆ ಧರಣಿ ಕೂರಬೇಡಿ, ನಿಮ್ಮ ಶಿವಕುಮಾರ್ ಮನೆ ಮುಂದೆ ಧರಣಿ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ ನೀಡಿದರು.