ಬೆಂಗಳೂರು:ಪದವಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ತೆರವಾಗುವ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿ ಹೊರಡಿಸಿದೆ.
ಶಿಕ್ಷಕರ ಕ್ಷೇತ್ರದಿಂದ ಡಾ.ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಬೋಜೇಗೌಡ, ಮರಿತಿಬ್ಬೇಗೌಡ, ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ ಬಿ. ಪಾಟೀಲ್, ಆಯನೂರು ಮಂಜುನಾಥ್ ಹಾಗೂ ಎ.ದೇವೇಗೌಡ ಅವರ ಸದಸ್ಯಾವಧಿ 2024ರ ಜೂನ್ 21ಕ್ಕೆ ಅಂತ್ಯಗೊಳ್ಳಲಿದೆ.
ರಾಜಕೀಯ ಕಾರಣಗಳಿಗಾಗಿ ಮರಿತಿಬ್ಬೇಗೌಡ ಹಾಗೂ ಆಯನೂರು ಮಂಜುನಾಥ್ ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೂನ್ 3ರಂದು ಮತದಾನ
ಕರ್ನಾಟಕ ದಕ್ಷಿಣ, ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ಬೆಂಗಳೂರು, ಈಶಾನ್ಯ, ನೈಋತ್ಯ ಪದವೀಧರ ಕ್ಷೇತ್ರಗಳಿಗೆ ಜೂನ್ 3ರಂದು ಮತದಾನ ನಡೆಯಲಿದೆ.
ಜೂನ್ 6ರಂದು ಮತ ಎಣಿಕೆ ಆಯಾ ಕ್ಷೇತ್ರದ ಕೇಂದ್ರ ಸ್ಥಾನಗಳಲ್ಲಿ ನಡೆದು, ಫಲಿತಾಂಶ ಪ್ರಕಟವಾಗಲಿದೆ.
ಈ ಆರು ಕ್ಷೇತ್ರಗಳಿಗೆ ಮೇ 9ರಂದು ಅಧಿಸೂಚನೆ ಹೊರಡಿಸಲಿದ್ದು, ಅಂದೇ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ, ಮೇ 16 ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದೆ, 17ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆದುಕೊಳ್ಳಲು ಮೇ 20 ಕಡೆಯ ದಿನವಾಗಿರುತ್ತದೆ.
ಕಳೆದ ಚುನಾವಣೆಯಲ್ಲಿ ಬಿಜೆಪಿ ಮೂರರಲ್ಲೂ, ಜೆಡಿಎಸ್ ಎರಡರಲ್ಲೂ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.