ಬೆಂಗಳೂರು:ಅಸಂಖ್ಯಾತ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪತ್ತೆ ಹಚ್ಚಿ ಕರೆತರಲು ಲುಕ್‌ಔಟ್ ನೋಟಿಸ್ ಜಾರಿಯಾಗಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿದೆ ಎಂದರು.
ಪ್ರಜ್ವಲ್ ವಿದೇಶಕ್ಕೆ ಹೋಗಿರುವುದು ಸತ್ಯ ಹಾಗಾಗಿ ಲುಕ್‌ಔಟ್ ನೋಟಿಸ್ ನೀಡಲಾಗಿದೆ, ಎಲ್ಲಾ ವಿಮಾನ ನಿಲ್ದಾಣ, ರೈಲು ನಿಲ್ದಾಣ ಮತ್ತು ಬಂದರು ಸೇರಿದಂತೆ ಎಲ್ಲೆಡೆ ನೋಟಿಸ್ ನೀಡಿದ್ದೇವೆ.
ತನಿಖೆಗೆ ಹಾಜರಾಗದಿದ್ದರೆ ಬಂಧನ
ಪ್ರಜ್ವಲ್ ಹಾಗೂ ರೇವಣ್ಣ ಪ್ರಕರಣದಲ್ಲಿ ಯಾರನ್ನೂ ಬಿಡುವ ಮಾತಿಲ್ಲ, ಅವರು ನೋಟಿಸ್‌ಗೆ ಗೌರವ ನೀಡಿ ತನಿಖೆಗೆ ಹಾಜರಾಗದಿದ್ದರೆ, ಕಾನೂನಿನಂತೆ ಬಂಧಿಸಲಾಗುವುದು.
ಇಡೀ ವಿಶ್ವವೇ ನಮ್ಮ ಕಡೆ ನೋಡುವಂತಹ ಅಪರಾಧಿಕ ಕೃತ್ಯ ಹಾಸನದಲ್ಲಿ ನಡೆದಿದೆ, ಮೊದಲು ಪ್ರಕರಣವನ್ನು ಸಿಐಡಿಗೆ ವಹಿಸಿ ನಂತರ ಎಸ್‌ಐಟಿ ರಚನೆ ಮಾಡಿದ್ದೇವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಇಬ್ಬರು ಮಹಿಳೆಯರು ದೂರು ನೀಡಿದ್ದಾರೆ, ಅವರ ದೂರಿನ ಅನ್ವಯ 41(ಎ) ಅಡಿ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್ ನೀಡಿದ 24 ಗಂಟೆಯೊಳಗಾಗಿ ವಿಚಾರಣೆಗೆ ಒಳಗಾಗಬೇಕು ಇಲ್ಲದಿದ್ದರೆ ಪೊಲೀಸರು ಕಾನೂನು ರೀತಿ ಮುಂದುವರೆಯುತ್ತಾರೆ ಎಂದರು.
ಅವರು ಸಮಯ ಕೇಳಿದರೂ ಕಾನೂನಿನಡಿಯಲ್ಲಿ ಸಮಯ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್
ಕೇಂದ್ರ ಸರ್ಕಾರವೇ ಪ್ರಜ್ವಲ್‌ಗೆ ರಾಜತಾಂತ್ರಿಕ (ಡಿಪ್ಲೋಮ್ಯಾಟಿಕ್) ಪಾಸ್‌ಪೋರ್ಟ್ ನೀಡಿದೆ. ಹಾಗಾಗಿ ಆತ ರಾತ್ರೋ ರಾತ್ರಿ ವಿದೇಶಕ್ಕೆ ಹಾರಿದ್ದಾನೆ.
ಈ ಪಾಸ್‌ಪೋರ್ಟ್‌ನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಪ್ರಜ್ವಲ್ ಅನ್ನು ವಿದೇಶದಿಂದ ಕರೆಸಿ ವಿಚಾರಣೆ ನಡೆಸಲಾಗುವುದು, ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ.
ಇಬ್ಬರಿಗೂ ನೋಟಿಸ್
ಪ್ರಮುಖ ಆರೋಪಿಯಾಗಿ ಎಚ್.ಡಿ.ರೇವಣ್ಣ, ಎರಡನೇ ಆರೋಪಿ ಪ್ರಜ್ವಲ್ ರೇವಣ್ಣ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದರು.
ಹಲವು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ಮಾಡಿರುವ ದೃಶ್ಯಗಳಿರುವ ಪೆನ್‌ಡ್ರೈವ್ ಮತ್ತು ಸಿಡಿಗಳು ಹಾಸನ ಲೋಕಸಭಾ ಚುನಾವಣೆಗೆ 48 ಗಂಟೆಗೆ ಮುನ್ನ ಹರಿದಾಡಿದ್ದವು.
ಪ್ರಜ್ವಲ್ ಮರು ಆಯ್ಕೆ ಬಯಸಿ ಎನ್‌ಡಿಎ ಕೂಟದ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ.