ಚಿಕ್ಕೋಡಿ:ಕರ್ನಾಟಕದಲ್ಲಿ ಆಡಳಿತಕ್ಕೆ ಬಂದ 10 ತಿಂಗಳಲ್ಲಿ ಇಡೀ ರಾಜ್ಯವನ್ನು ಕಾಂಗ್ರೆಸ್ ಹಾಳು ಮಾಡಿಬಿಟ್ಟಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಟೀಕಿಸಿದ್ದಾರೆ.
ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಡಿಪಿಐ ಬೆಂಬಲದೊಂದಿಗೆ ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಸಂಭವಿಸಿತು ಎಂದರು.
ಈ ಸ್ಫೋಟವನ್ನು ಗ್ಯಾಸ್ ಸಿಲಿಂಡರ್ ಸ್ಫೋಟ ಎಂದು ಕಾಂಗ್ರೆಸ್ ಹೇಳಿತು, ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಯನ್ನು ಕೈಗೊತ್ತಿಕೊಳ್ಳುತ್ತಿದ್ದಂತೆ ಇದು ಭಯೋತ್ಪಾದಕರು ನಡೆಸಿದ ದುಷ್ಕೃತ್ಯ ಎಂಬುದನ್ನು ಬೆಳಕಿಗೆ ತಂದಿತು.
ಧರ್ಮಾಂತರಕ್ಕೆ ಒಪ್ಪದ ಹೆಣ್ಣು ಮಗಳ ಕೊಲೆ
ಹುಬ್ಬಳ್ಳಿಯಲ್ಲಿ ಧರ್ಮಾಂತರಕ್ಕೆ ಒಪ್ಪದ ಒಬ್ಬ ಹೆಣ್ಣು ಮಗಳನ್ನು ಕೊಲೆ ಮಾಡಲಾಯಿತು, ಕಾಂಗ್ರೆಸ್ ಈ ಘಟನೆಯನ್ನು ಖಾಸಗಿ ವಿಷಯ ಎಂಬಂತೆ ಬಿಂಬಿಸಿತು, ಈ ಕೊಲೆ ಘಟನೆಯನ್ನು ಸಿಬಿಐ ತನಿಖೆಗೆ ಕೊಟ್ಟರೆ, ಕೊಲೆ ಅಪರಾಧಿಗಳನ್ನು ಉಲ್ಟಾ ನೇತುಹಾಕಿ, ಶಿಕ್ಷೆಗೆ ಗುರಿ ಪಡಿಸುವ ಮೂಲಕ ನೇಹಾ ಹಿರೇಮಠ್ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದರು.
ರಾಜ್ಯದಲ್ಲಿ ನೀರು ಮತ್ತು ವಿದ್ಯುತ್ ಸಮಸ್ಯೆ ತೀವ್ರವಾಗಿದೆ, ಕಾಂಗ್ರೆಸ್‌ಗೆ ಮತ ಹಾಕದಿದ್ದರೆ, ವಿದ್ಯುತ್ ನಿಲ್ಲಿಸುವುದಾಗಿ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ.
ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ, ಕೇಂದ್ರ ಸರ್ಕಾರ ರೈತ ಸಮ್ಮಾನ್ ನಿಧಿ ಯೋಜನೆಯಡಿ ನೀಡುತ್ತಿದ್ದ 6 ಸಾವಿರ ರೂ. ಜೊತೆಗೆ ಹೆಚ್ಚುವರಿಯಾಗಿ 4 ಸಾವಿರ ರೂ. ಸೇರಿ ಒಟ್ಟು 10 ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿತ್ತು.
ರೈತ ವಿರೋಧಿ
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ 4 ಸಾವಿರ ರೂ.ಗಳನ್ನು ಕಡಿತ ಮಾಡುವ ಮೂಲಕ ರೈತ ವಿರೋಧಿ ಕೆಲಸ ಮಾಡಿತು.
ಕೇಂದ್ರದ ಎನ್‌ಡಿಎ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ನೀಡಿದೆ, 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ, 930 ಕೋಟಿ ರೂ. ವೆಚ್ಚಲ್ಲಿ ಹೊಸ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಮುಂದಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 11 ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗಿದೆ, ಬಡ ಕುಟುಂಬದ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರಧಾನ್ಯ ನೀಡಲಾಗುತ್ತಿದೆ, ಮೂರು ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಒದಗಿಸಲಾಗಿದೆ, ಉಜ್ವಲ ಯೋಜನೆಯಡಿ ಮೂರು ಲಕ್ಷ ಕುಟುಂಬಕ್ಕೆ ಉಚಿತ ಗ್ಯಾಸ್ ಸಂಪರ್ಕ ಒದಗಿಸಲಾಗಿದೆ, ಉಚಿತ ಶೌಚಾಲಯಗಳನ್ನು ನಿರ್ಮಿಸಿ ಕೊಡಲಾಗಿದೆ.
ಉತ್ತರ ಕರ್ನಾಟಕದಲ್ಲಿ ಎರಡು ಲಕ್ಷ ರೈತರು ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿದ್ದಾರೆ, ಕಬ್ಬು ಬೆಳಗಾರರಿಗೆ ಅನುಕೂಲ ಮಾಡಲು ಪ್ರತಿ ಟನ್ ಕಬ್ಬಿಗೆ 340 ರೂ. ಸಬ್ಸಿಡಿ ಹೆಚ್ಚಳ ಮಾಡಲಾಯಿತು ಎಂದರು.
ಕರ್ನಾಟಕದ ಜನರ ಕೊಡುಗೆ
ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಕಾರ್ಯನಿರ್ವಹಿಸುವಲ್ಲಿ ಕರ್ನಾಟಕದ ಜನರ ಕೊಡುಗೆ ಇದೆ, ಮತ್ತೊಮ್ಮೆ ಮೂರನೇ ಬಾರಿಗೆ ಮೋದಿ ಅವರನ್ನು ಪ್ರಧಾನಿ ಮಾಡಿದರೆ, ದೇಶದ ಆರ್ಥಿಕಸ್ಥಿತಿಯನ್ನು ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ತರುವ ಪ್ರಯತ್ನ ಮಾಡಲಾಗುವುದು.
ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತ ಸಂದರ್ಭದಲ್ಲಿ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರ ನಡೆಯಿತು, ಮೋದಿ ಅವರು 13 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಕಳೆದ 10 ವರ್ಷದಿಂದ ದೇಶದ ಪ್ರಧಾನಿಯಾಗಿ ಒಟ್ಟು 23 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ಹಗರಣ ಇಲ್ಲ ಎಂದರು.
ರಜೆ ತೆಗೆದುಕೊಳ್ಳದೆ ಕೆಲಸ
ಮೋದಿ ತಮ್ಮ ಆಡಳಿತಾವಧಿಯಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ತಿಂಗಳಿಗೊಮ್ಮೆ ಮೋಜು ಮಾಡಲು ವಿದೇಶ ಪ್ರವಾಸ ಮಾಡುತ್ತಾರೆ ಎಂದು ಟೀಕಿಸಿದರು.
ಪರಿವಾರ ವಾದದ ಕಾಂಗ್ರೆಸ್ ಬೇಕೆ, ಅಭಿವೃದ್ಧಿಶೀಲ ಬಿಜೆಪಿ ಬೇಕೆ ಎಂಬುದನ್ನು ಮತದಾರರು ನಿರ್ಧರಿಸಬೇಕು ಎಂದು ಕರೆ ನೀಡಿದರು.