ಸಿಂಧನೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ
ರಾಯಚೂರು: ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಕ್ಷಣವೇ ವಿಶೇಷ ತನಿಖಾ ದಳ (SIT) ನೊಟೀಸ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಪಡಿಸಿದರು.
ಇಷ್ಟು ಕರಾರುವಕ್ಕಾಗಿ, ಅಂಕಿ ಅಂಶಗಳ ಸಮೇತ ರಾಹುಲ್ ಗಾಂಧಿ ಮಾಹಿತಿ ನೀಡಿದ್ದಾರೆ. ಈ ಸರ್ಕಾರಕ್ಕೆ ಗಂಡಸ್ತನ, ತಾಕತ್ತು ಎನ್ನುವುದು ಇದ್ದರೆ ಈ ಕೂಡಲೇ ಆತನಿಗೆ ತನಿಖಾ ದಳದಿಂದ ಕೂಡಲೇ ನೋಟಿಸ್ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಎನ್ ಡಿಎ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು; ರಾಹುಲ್ ಗಾಂಧಿ ವಿರುದ್ಧ ತೀವ್ರ ಅಕ್ರೋಶ ವ್ಯಕ್ತಪಡಿಸಿದರು.
“ದೇಶದ ಮಾಜಿ ಪ್ರಧಾನಮಂತ್ರಿಯ ಮಗನಾ ಇವನು? ಹಾಗಾದರೆ ಇವನ ಬಳಿ ಎಲ್ಲಾ ಮಾಹಿತಿಯೂ ಇದೆ ಎಂದಾಯಿತು. ಈತನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿರಬೇಕು ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರಬೇಕು, ಇಲ್ಲವೆ ಗೃಹ ಸಚಿವರೇ ತಿಳಿಸಿರಬಹುದು. ತನಿಖಾ ದಳಕ್ಕೆ ಜವಾಬ್ದಾರಿ ಎನ್ನುವುದಿದ್ದರೆ ರಾಹುಲ್ ಗಾಂಧಿಗೆ ತಕ್ಷಣವೇ ನೋಟೀಸ್ ಕೊಡಬೇಕು. ಕರೆದು ವಿಚಾರಣೆ ನಡೆಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವುದನ್ನು ರಾಹುಲ್ ಗಾಂಧಿ ಮಾಧ್ಯಮಗಳ ಮುಂದೆಯೂ ಹೇಳಿದ್ದಾರೆ, ಬಹಿರಂಗ ಸಭೆಯಲ್ಲೂ ಹೇಳಿದ್ದಾರೆ. ಕರೆದು ವಿಚಾರಣೆ ಮಾಡಿ. ಸತ್ಯ ಏನೆಂಬುದು ಹೊರಗೆ ಬರಲಿ ಎಂದು ತನಿಖಾ ದಳವನ್ನು ಅವರು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಕ್ಷಮೆ ಕೇಳಬೇಕಿತ್ತಂತೆ. ಮೋದಿ ಅವರಿಗೇನು ಕನಸು ಬಿದ್ದಿತ್ತಾ? ಮೊದಲೇ ಮಾಹಿತಿ ಗೊತ್ತಿದ್ದವರು ಏಕೆ ಹೇಳಲಿಲ್ಲ? ಮೊದಲೇ ಪ್ರಧಾನಿಗಳಿಗೆ ಕೊಡಬೇಕಿತ್ತು.
ಯಾಕೆ ಕೊಡಲಿಲ್ಲ? ಇವರ ಸಿಎಂ, ಡಿಸಿಎಂ ಯಾಕೆ ಹೇಳಲಿಲ್ಲ? ನಿಮ್ಮ ಬಾಗಲಕೋಟೆಯ ಹೆಚ್.ವೈ.ಮೇಟಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಚುನಾವಣೆ ಪ್ರಚಾರ ಮಾಡುತ್ತೀರಲ್ಲಾ. ಲಜ್ಜೆ ಆಗುವುದಿಲ್ಲವೇ ನಿಮಗೆ? ನಿಮ್ಮ ಬಳಿ ಎಲ್ಲಾ ವಿಷಯ ಇತ್ತು ಅಲ್ಲವೇ? ಏಪ್ರಿಲ್ 21ರವರೆಗೆ ಯಾಕೆ ಕಾದು ಕೂತಿದ್ದಿರಿ? ಮೇ 7ನೇ ತಾರೀಖು ಮತದಾನ ಮುಗಿದ ಮೇಲೆ ಈ ಪ್ರಕರಣ ಎಲ್ಲಿಗೆ ಹೋಗಿ ಮುಟ್ಟುತ್ತೆ? ನಿಮಗೆ ಬೇಕಿರುವುದು 7ನೇ ತಾರೀಕು ನಡೆಯುವ ಮತದಾನ ಮತ್ತು ಜನರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದು. ಅಷ್ಟೇ ಅಲ್ಲವೇ ಎಂದು ಸಿಎಂ, ಡಿಸಿಎಂ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.
ಹಿಂದೆ ನೀನು ಏನೆಲ್ಲಾ ಮಾಡಿದ್ದೆ ಎನ್ನುವುದು ಲೋಕಕ್ಕೆ ಗೊತ್ತು. ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸಿಕೊಂಡು ಹಣ ಮಾಡಿದವನು ಆ ವ್ಯಕ್ತಿ. ಆತನಿಗೆ ಅಂಥ ಅನುಭವ ಮೊದಲಿನಿಂದಲೂ ಇದೆ. ಹಿಂದೊಮ್ಮೆ ಒಬ್ಬ ಶಾಸಕನ ಜೀವನದಲ್ಲಿ ಏನೆಲ್ಲಾ ಆಟ ಆಡಿದ, ಹೆಣ್ಮಗಳನ್ನು ಹೇಗೆಲ್ಲಾ ಬಳಸಿಕೊಂಡ ಎನ್ನುವುದು ಗೊತ್ತಿದೆ.
ಪೆನ್ ಡ್ರೈವ್ ಅನ್ನು ಕುಮಾರಸ್ವಾಮಿಯೇ ಬಿಟ್ಟಿರಬೇಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಅಂಥ ಕೆಟ್ಟ ಅನುಭವ ಇರುವವನೇ ಪೇನ್ ಡ್ರೈವ್ ಬೀದಿಗೆ ಬಿಟ್ಟಿದ್ದಾರೆ ಎಂದು ಡಿಕೆಶಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದು ಇದ್ದರೆ ಪ್ರಕರಣದ ಬಗ್ಗೆಯೂ ನಿಷ್ಪಕ್ಷವಾಗಿ ತನಿಖೆ ನಡೆಸಲಿ. ಅದೇ ರೀತಿ ಆ ದೃಶ್ಯಗಳಲ್ಲಿರುವ ಹೆಣ್ಮಕ್ಕಳ ಚಿತ್ರಗಳನ್ನು ಬೀದಿ ಬೀದಿಯಲ್ಲಿ ಬಿಕರಿ ಮಾಡಿದ ನೀಚರಿಗೂ ಶಿಕ್ಷೆ ಕೊಡಿಸಲಿ. ನಿಮಗೆ, ನಿಮ್ಮ ಪಕ್ಷಕ್ಕೆ ಹೆಣ್ಮಕ್ಕಳ ಬಗ್ಗೆ ಗೌರವ ಇದ್ದರೆ ಅವರ ಚಿತ್ರಗಳ ಈ ರೀತಿಯಾಗಿ ಮಾರುಕಟ್ಟೆಗೆ ಬಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಿರಾ ಸಿದ್ದರಾಮಯ್ಯನವರೇ ಎಂದು ಅವರು ಪ್ರಶ್ನಿಸಿದರು.
ನಾನು ನೂರಾರು ಬಾರಿ ಹೇಳಿದ್ದೇನೆ. ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು. ಆದರೂ ನೀವು ನನ್ನನ್ನು, ದೇವೇಗೌಡನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತರುತ್ತಿದ್ದೀರಿ.
ಪ್ರತಿನಿತ್ಯ ಹೀಗೆ ಹೇಳಿಕೆ ನೀಡುತ್ತಿದ್ದರೆ ಇನ್ನು ತನಿಖಾ ದಳ ಏತಕ್ಕೆ ಬೇಕು? ಹಿಂದೆ ಯಾವ ಯಾವ ಪ್ರಕರಣಕ್ಕೆ SIT ಮಾಡಿಕೊಂಡಿದ್ದಿರಿ? ಯಾವ ಯಾವ ಉದ್ದೇಶಕ್ಕೆ ರಚನೆ ಮಾಡಿಕೊಂಡಿದ್ದಿರಿ? ಅವು ನಡೆಸಿದ ತನಿಖೆಗಳೆಲ್ಲಾ ಏನಾದವು ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ನನಗೆ ನನ್ನ ತಂದೆ ತಾಯಿ ಜೀವ ಮುಖ್ಯ
ತಮಗೂ ರೇವಣ್ಣ ಕುಟುಂಬಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ಹಾಗೂ ದೇವೇಗೌಡರು ತಮ್ಮ ಮನೆಗೆ ವಕೀಲರನ್ನು ಕರೆಸಿ ಚರ್ಚೆ ಮಾಡಿದ್ದಾರೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಕಟುವಾಗಿ ವಾಗ್ದಾಳಿ ನಡೆಸಿದರು.
ನನಗೆ, ನನ್ನ ತಂದೆ, ತಾಯಿ ಆರೋಗ್ಯ ಮುಖ್ಯ. ನನ್ನ ತಂದೆಯವರ ಅರವತ್ತು ವರ್ಷಗಳ ರಾಜಕೀಯ ಜೀವನ ಹೇಗಿತ್ತು ಎನ್ನುವುದು ನನಗೆ ಗೊತ್ತಿದೆ. ನನ್ನ ತಾಯಿ ಯಾವ ಸಂಸ್ಕೃತಿಯಲ್ಲಿ ಬದುಕಿದ್ದಾರೆ ಎನ್ನವುದು ನನಗೆ ಗೊತ್ತಿದೆ. ಅವರಿಬ್ಬರ ಜೀವಕ್ಕೆ ಅಪಾಯವಾಗಬಾರದು. ಅವರ ಜೀವಕ್ಕೆ ತೊಂದರೆ ಆಗಬಾರದು, ಮಗನಾಗಿ ಧೈರ್ಯ ಹೇಳಲು ಎರಡು ದಿನದಿಂದ ಅವರ ಮನೆಗೆ ಹೋಗಿದ್ದೆ.
ಇವತ್ತು ನೀವು ಅವರನ್ನು ಟೀಕೆ ಮಾಡುತ್ತಿದ್ದೀರಿ. ಅಷ್ಟು ವರ್ಷ ಅವರ ಜತೆ ರಾಜಕೀಯ ಮಾಡಿ ಹೋಗಿದ್ದೀರಿ. ಅವರು ಯಾವ ರೀತಿ ಬರುಕಿದರು ಎಂಬುದನ್ನು ಮರೆತುಬಿಟ್ಟಿದ್ದೀರಿ. ನಿಮ್ಮ ಯೋಗ್ಯತೆಗೆ ತಂದೆ-ತಾಯಿ ಲೆಕ್ಕಕ್ಕೆ ಇಲ್ಲದಿರಬಹುದು. ನೀವು ಆ ಸಂಸ್ಕೃತಿಯಿಂದ ಬಂದವರಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಮಾಧ್ಯಮಗಳು ಕ್ಯಾಮೆರಾ ಹಿಡಿದುಕೊಂಡು ಅಲ್ಲೇ ಇದ್ದವಲ್ಲ. ನಿಮ್ಮದೇ ಸರ್ಕಾರ ಇದೆಯಲ್ಲಾ. ಅವರು ಚಿತ್ರಿಸಿರುವ ಎಲ್ಲಾ ದೃಶ್ಯಗಳನ್ನು ತರಿಸಿಕೊಂಡು ನೋಡಿ. ದೇವೇಗೌಡರ ಮನೆಗೆ ಯಾವ ವಕೀಲರು ಬಂದಿದ್ದರು ಎನ್ನುವುದು ನಿಮಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯನವರೇ. ನಿಮಗೆ ಮನುಷ್ಯತ್ವ ಇಲ್ಲ. ವಯಸ್ಸಾಗಿರುವ ನಮ್ಮ ತಂದೆ, ತಾಯಿ ಎಷ್ಟು ನೋವಿನಲ್ಲಿ ಇದ್ದಾರೆ ಎನ್ನುವುದರ ಅರಿವು ನಿಮಗೆ ಇದೆಯಾ? ಎಂದು ಕುಟವಾಗಿ ಪ್ರಶ್ನಿಸಿದರು.
ಮುಖ್ಯಮಂತ್ರಿಗಳೇ ಪದೇಪದೆ ಪ್ರಧಾನಿಗಳನ್ನು, ಬಿಜೆಪಿಯನ್ನು ಈ ವಿಷಯಕ್ಕೆ ಯಾಕೆ ಎಳೆದು ತರುತ್ತೀರಿ? ಈಗಾಗಲೇ ಗೃಹ ಸಚಿವರಾದ ಅಮಿತ್ ಶಾ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಆದರೂ ಸ್ವತಃ ನೀವು, ನಿಮ್ಮ ಡಿಸಿಎಂ, ನಿಮ್ಮ ಮಂತ್ರಿಗಳು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಾ ತನಿಖಾ ದಳ ನಡೆಸುತ್ತಿರುವ ತನಿಖೆಯ ದಿಕ್ಕು ತಪ್ಪಿಸುತ್ತಿದ್ದೀರಿ. ಹಾಗಾದರೆ, ತನಿಖಾದಳ ಯಾಕೆ ರಚನೆ ಮಾಡಿದಿರಿ? ಎಂದು ಮುಖ್ಯಮಂತ್ರಿಗಳನ್ನು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಆಲ್ಕೋಡ್ ಹನುಂತಪ್ಪ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ಹಿರಿಯ ನಾಯಕ ಚಂದ್ರಶೇಖರ್ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದರು.