ಬೆಂಗಳೂರು:ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ಸಂಪರ್ಕ ಪೂರ್ಣವಾಗಿ ಕಡಿತಗೊಂಡಿದೆಯಂತೆ.
ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಜರ್ಮನಿಗೆ ತೆರಳಿದ್ದರು.
ಅವರ ವಿರುದ್ಧ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿ ಎಸ್‌ಐಟಿ ರಚನೆ ಮಾಡಿದ್ದಲ್ಲದೆ, ಅವರನ್ನು ಪತ್ತೆ ಹಚ್ಚಿ ಕರೆತರಲು ಲುಕ್‌ಔಟ್ ನೋಟಿಸ್ ಹೊರಡಿಸಲಾಗಿತ್ತು.
ಕೊಲ್ಲಿ ರಾಷ್ಟ್ರಕ್ಕೆ ಧಾವಿಸಿದ ಮಾಹಿತಿ
ಈ ನೋಟಿಸ್‌ನಿಂದ ಪತ್ತೆಯಾಗದ ನಂತರ ಬ್ಲೂಕಾರ್ನರ್ ನೋಟಿಸ್ ಹೊರಡಿಸಲಾಯಿತು, ಈ ನೋಟಿಸ್ ಹೊರಬೀಳುತ್ತಿದ್ದಂತೆ ಅವರು ಜರ್ಮನಿಯಿಂದ ಕೊಲ್ಲಿ ರಾಷ್ಟ್ರಕ್ಕೆ ಧಾವಿಸಿದ ಮಾಹಿತಿ ಎಸ್‌ಐಟಿ ಮತ್ತು ಅವರ ಕಟುಂಬದವರಿಗೆ ಬಂದಿತ್ತು.
ಮಸ್ಕಟ್ ನಗರದ ಉದ್ಯಮಿ ಒಬ್ಬರ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದು, ಕಳೆದ ಶನಿವಾರವೇ ಭಾರತಕ್ಕೆ ಹಿಂದಿರುಗುತ್ತಾರೆ ಎಂಬ ಮಾಹಿತಿ ಇತ್ತು.
ಹಿಂತಿರುಗುತ್ತಿದ್ದಂತೆ ಅವರನ್ನು ಬಂಧಿಸಲು ಮಂಗಳೂರು ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಂಜೆಯಾಗುತ್ತಿದ್ದಂತೆ ಅವರೊಂದಿಗಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿತು.
ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ
ಅವರ ಚಲನ ವಲನದ ಬಗ್ಗೆ ಕುಟುಂಬಕ್ಕೂ ಹಾಗೂ ಎಸ್‌ಐಟಿಗೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.
ಉನ್ನತ ಮೂಲಗಳ ಪ್ರಕಾರ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣಾ ಮತದಾನದ ನಂತರ, ಇಲ್ಲವೇ ರಾಷ್ಟ್ರದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಕ್ರಿಯೆ ಪೂರ್ಣವಾಗಿ ಮುಗಿದ ನಂತರವಷ್ಟೇ ಹಿಂತಿರುಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇಷ್ಟರ ನಡುವೆಯೂ ಪ್ರಕರಣವನ್ನು ಎಸ್‌ಐಟಿ ಗಂಭೀರವಾಗಿ ತೆಗೆದುಕೊಂಡಿದ್ದು, ಅವರ ಪತ್ತೆಗಾಗಿ ತೀವ್ರ ಯತ್ನ ನಡೆಸುತ್ತಿದೆ.