ಬೆಂಗಳೂರು:ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಎಸ್‌ಐಟಿ ಬಂಧನದ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ನಗರದ ೧೭ನೇ ಎಸಿಎಂಎಂ ಕೋರ್ಟ್ ಮುಂದೆ ರೇವಣ್ಣ ಅವರನ್ನು ಹಾಜರುಪಡಿಸಲಾಯಿತು.
ವಿಚಾರಣೆಗೆ ಸ್ಪಂದಿಸಲಿಲ್ಲ
ಬಂಧನದ ಸಮಯದಲ್ಲಿ ವಿಚಾರಣೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ, ಇನ್ನು ನಮಗೆ ಅವರ ಕಸ್ಟಡಿ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಎಸ್‌ಐಟಿ ತಿಳಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶ ರವೀಂದ್ರ ಕಟ್ಟಿಮನಿ ಅವರು, ಜಾಮೀನು ಅರ್ಜಿಯನ್ನು ನಾಳೆಗೆ ಮುಂದೂಡಿ, ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು.
ಇದಕ್ಕೂ ಮುನ್ನ ಎಸ್‌ಐಟಿ ಕಸ್ಟಡಿ ಸಂಬಂಧ ಏನಾದರೂ ನೀವು ನ್ಯಾಯಾಲಯದ ಮುಂದೆ ಹೇಳುವುದಿದೆಯೇ ಎಂದು ಪ್ರಶ್ನಿಸಿದರು.
ಮಾಡದಿದ್ದನ್ನು ಹೇಗೆ ಒಪ್ಪಿಕೊಳ್ಳಲಿ
ಮೂರು ದಿನಗಳಿಂದ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಒಳಪಡಿಸಿದ್ದರು, ಅವರ ಆರೋಪಗಳನ್ನು ಒಪ್ಪಿಕೊಳ್ಳಲು ನಾನು ಸಿದ್ಧವಿಲ್ಲ, ನಾನು ಮಾಡದಿದ್ದನ್ನು ಹೇಗೆ ಒಪ್ಪಿಕೊಳ್ಳಲಿ ಎಂದರು.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಸರ್ಕಾರಿ ವಕೀಲರು, ರೇವಣ್ಣ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ ಎಂದು ದೂರಿದಾಗ, ಮಾಧ್ಯಮದವರು ಅವರಾಗೀ ಕೇಳಿದಾಗ ನಾನು ಏನು ಹೇಳಬೇಕೋ, ಅದನ್ನು ಹೇಳಿದ್ದೇನೆ.
ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲದಿದ್ದರೂ ರಾಜಕೀಯವಾಗಿ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ, ಇಂತಹ ಸುಳ್ಳುಗಳನ್ನು ನಾನು ಹೇಗೆ ಒಪ್ಪಿಕೊಳ್ಳಲಿ, ಅವರು ಕೇಳಿದ್ದನ್ನೇ ಕೇಳುತ್ತಿದ್ದರು, ನಾನು ಹೇಳಿದ್ದನ್ನೇ ಹೇಳುತ್ತಿದ್ದೆ.
ಆರಾಮ ಇಲ್ಲ ಎಂದರೂ ವಿಚಾರಣೆ
ಮೂರು ದಿನದ ಕಸ್ಟಡಿ ಮುಗಿಯಿತು ನಾಳೆ ನ್ಯಾಯಾಲಯಕ್ಕೆ ನಿಮ್ಮನ್ನು ಹಾಜರು ಪಡಿಸುತ್ತೇವೆ ಎಂದ ಅವರು, ಇಂದು ಬೆಳಗ್ಗೆ ನನಗೆ ಆರಾಮ ಇಲ್ಲ ಎಂದರೂ ಮತ್ತೆ ವಿಚಾರಣೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಕರೆತಂದರು.
ಮೂರು ದಿನಗಳಿಂದ ನಾನು ನಿದ್ದೆ ಮಾಡಿಲ್ಲ, ಆರೋಗ್ಯ ಕೆಟ್ಟಿದೆ, ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆ, ನಿನ್ನೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು, ಆಸ್ಪತ್ರೆಗೆ ದಾಖಲು ಮಾಡುವ ಬದಲು ಮತ್ತೆ ವಾಪಸು ಕರೆತಂದರು, ಈಗಲೂ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ, ನಾನು ಹೇಳುವುದು ಇನ್ನೇನೂ ಇಲ್ಲ ಎಂದರು.
ಅವರ ಹೇಳಿಕೆ ಮುಗಿಯುತ್ತಿದ್ದಂತೆ ಏಳು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ಜಾಮೀನು ಅರ್ಜಿಯನ್ನು ನಾಳೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದರಿಂದ, ರೇವಣ್ಣ ಅವರಿಗೆ ಜೈಲೇ ಗತಿಯಾಯಿತು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಸಂತ್ರಸ್ತೆಯನ್ನು ರೇವಣ್ಣ ಅಪಹರಿಸಿದ್ದಾರೆಂದು ಆರೋಪಿಸಿ, ಎಸ್‌ಐಟಿ ಅವರನ್ನು ವಶಕ್ಕೆ ಪಡೆದು ನಾಲ್ಕು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿತ್ತು.