ಬೆಂಗಳೂರು:ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಿ ಪರಿಹಾರ ಕ್ರಮ ಕೈಗೊಳ್ಳಲು ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರ ಮುಖ್ಯ ಚುನಾವಣಾಧಿಕಾರಿಗಳನ್ನು ಕೋರಿದೆ.
ಕರ್ನಾಟಕದಲ್ಲಿ ಕಳೆದ ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದ 223 ತಾಲ್ಲೂಕುಗಳು ಬರ ಪೀಡಿತಗೊಂಡು ಕುಡಿಯುವ ನೀರು ಮತ್ತು ಮೇವಿಗೆ ಸಮಸ್ಯೆ ಉಂಟಾಗಿದೆ.
ಪರಿಹಾರ ಹೊಣೆ ಸರ್ಕಾರದ್ದಾಗಿದೆ
ಪ್ರಸಕ್ತ ಸಾಲಿನಲ್ಲೂ ನಿರೀಕ್ಷೆಯಂತೆ ಮಳೆ ಬಂದಿಲ್ಲ, ಈ ಕಾರಣದಿಂದ ಸಮಸ್ಯೆ ಇರುವ ಕಡೆ ಪರಿಹಾರ ಕೈಗೊಳ್ಳುವ ಹೊಣೆ ಸರ್ಕಾರದ್ದಾಗಿದೆ.
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ಪೂರ್ಣಗೊಂಡಿದೆ, ಆದರೆ, ಜೂನ್ 6ರವರೆಗೂ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.
ನಮ್ಮಲ್ಲಿ ಚುನಾವಣೆಯ ಮತದಾನ ಪೂರ್ಣಗೊಂಡಿರುವುದರಿಂದ ಈ ತುರ್ತು ವಿಷಯಕ್ಕೆ ಮಾತ್ರ ನೀತಿ ಸಂಹಿತೆ ಸಡಿಲಿಸಿ ಪರಿಹಾರ ಕಾರ್ಯಕೈಗೊಳ್ಳಲು ಅವಕಾಶ ಮಾಡಿಕೊಡಿ ಎಂದು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತರ ನಾವು ಯಾವುದೇ ಅಭಿವೃದ್ಧಿ ಮತ್ತು ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿಲ್ಲ.
ಜಿಲ್ಲಾಡಳಿತಗಳು ಚುನಾವಣಾ ಪ್ರಕ್ರಿಯೆಯಲ್ಲಿ ಮಗ್ನವಾಗಿದ್ದವು, ಇಂತಹ ಸಂದರ್ಭದಲ್ಲಿ ಕೆಲವೆಡೆ ಸಮಸ್ಯೆಗಳು ಎದುರಾಗಿವೆ, ಆದರೆ, ನಾವು ಮಧ್ಯಪ್ರವೇಶ ಮಾಡುವಂತಿಲ್ಲ.
ಬರ ಪರಿಹಾರ ನಿರ್ವಹಣೆಗೆ ಹಣದ ಕೊರತೆ ಇಲ್ಲ, ಈಗಾಗಲೇ ಜಿಲ್ಲಾಡಳಿತದ ಬಳಿಯೂ ಸಾಕಷ್ಟು ಹಣವಿದೆ, ಪರಿಹಾರ ಕಾಮಗಾರಿಗಳನ್ನಷ್ಟೇ ಕೈಗೊಳ್ಳಬೇಕು.
ಮುಂಗಾರು ವಿಳಂಬ ವರದಿ
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪ್ರಸಕ್ತ ವರ್ಷವೂ ಮುಂಗಾರು ವಿಳಂಬವಾಗುವ ವರದಿ ನೀಡಿರುತ್ತಾರೆ, ಈಗಾಗಲೇ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿರುತ್ತದೆ.
ಮುಂದಿನ ಎರಡು ತಿಂಗಳವರೆಗೆ ಜನರು ಹಾಗೂ ಜಾನುವಾರುಗಳಿಗೆ ಶುದ್ಧ ಹಾಗೂ ಸಮರ್ಪಕ ಕುಡಿಯುವ ನೀರಿನ ನಿರ್ವಹಣೆ ಅತ್ಯವಶ್ಯಕವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಬರ ಹಾಗೂ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಲು ಇಲಾಖಾ ಸಚಿವರಿಗೆ ಅನುಮತಿ ನೀಡಬೇಕು, ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳನ್ನು ಜಾರಿಗೊಳಿಸಲು ಅನುಮತಿ ನೀಡಬೇಕೆಂದು ಸರ್ಕಾರ ಮನವಿ ಮಾಡಿದೆ.