ಮೈಸೂರು:ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ಇಲ್ಲ, ನಮ್ಮ ಪೊಲೀಸರಿಂದಲೇ ತನಿಖೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಯ ನಿರಂತರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಮೂರು ದಿನ ಊಟಿಯಲ್ಲಿ ವಿಶ್ರಾಂತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರ ಬಗ್ಗೆ ವಿಶ್ವಾಸವಿದೆ, ಕಾನೂನು ರೀತ್ಯ ತನಿಖೆ ನಡೆಸಲಿದ್ದಾರೆ ಎಂದರು.
ಎಸ್‌ಐಟಿ ಮೇಲೆ ವಿಶ್ವಾಸವಿದೆ
ಪ್ರಕರಣದಲ್ಲಿ ನಾನಾಗಲೀ, ಡಿ.ಕೆ.ಶಿವಕುಮಾರ್ ಆಗಲೀ ಭಾಗಿಯಾಗಿಲ್ಲ, ನನಗೆ ಎಸ್‌ಐಟಿ ಮೇಲೆ ವಿಶ್ವಾಸವಿದೆ, ಸತ್ಯಾಸತ್ಯತೆ ಹೊರಬರುವ ನಂಬಿಕೆ ಇದೆ.
ಬಿಜೆಪಿ ಯಾವತ್ತಾದರೂ ಒಂದು ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟಿದೆಯಾ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ. ರವಿ ಪ್ರಕರಣ, ಲಾಟರಿ ಪ್ರಕರಣ, ಸಚಿವ ಕೆ.ಜೆ. ಜಾರ್ಜ್ ಮೇಲಿನ ಆರೋಪ, ಪರೇಶ್ ಮೇಸ್ತ ಪ್ರಕರಣಗಳನ್ನು ಸಿಬಿಐಗೆ ವಹಿಸಿತ್ತು, ಈ ಪ್ರಕರಣಗಳಲ್ಲಿ ಯಾರಿಗಾದರೂ ಶಿಕ್ಷೆಯಾಗಿದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯವರೇ ಸಿಬಿಐ ಅನ್ನು ’ಕರಪ್ಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್’ ಎಂದು ಬಣ್ಣಿಸಿದ್ದರು, ದೇವೇಗೌಡರು ’ಚೋರ್ ಬಚಾವೋ ಸಂಸ್ಥೆ’ ಎಂದಿದ್ದರು, ಈಗ ಸಿಬಿಐ ಮೇಲೆ ವಿಶ್ವಾಸ ಬಂತೆ, ನನಗೆ ಸಿಬಿಐ ಮೇಲೆ ವಿಶ್ವಾಸವಿದೆ, ನಮ್ಮ ಪೊಲೀಸರ ಬಗ್ಗೆಯೂ ನಂಬಿಕೆ ಇದೆ, ಅದಕ್ಕಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ.
ಮಧ್ಯಪ್ರವೇಶ ಮಾಡುವುದಿಲ್ಲ
ಕಾನೂನು ರೀತ್ಯ ನಡೆಯುತ್ತಿರುವ ಕೆಲಸದಲ್ಲಾಗಲೀ, ತನಿಖೆಯಲ್ಲಾಗಲೀ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ, ಎಸ್‌ಐಟಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುವ ನಂಬಿಕೆ ಇದೆ, ನಾನು ಯಾವತ್ತೂ ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿ ಎಂದು ಹೇಳಿಲ್ಲ.
ಅಂತಾರಾಷ್ಟ್ರೀಯ ಮಟ್ಟದ ತನಿಖೆ ಅಗತ್ಯವಿಲ್ಲ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಡಬೇಕು, ಎಲ್ಲ ಅಪರಾಧ ಪ್ರಕರಣಗಳ ತನಿಖೆ ಯಾರು ಮಾಡುವುದು ನಮ್ಮ ಪೊಲೀಸರಲ್ಲವೇ, ವಿಶೇಷ ತನಿಖಾ ದಳ ರಚಿಸಿರುವಾಗ ನಮ್ಮ ಪೊಲೀಸರನ್ನು ನಂಬಿಕೆ ಇರಬೇಕಲ್ಲವೆ.
ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಬಂಧನದಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂಬ ಆರೋಪದಲ್ಲಿ ಹುರುಳಿಲ್ಲದಿದ್ದರೆ ನಿರೀಕ್ಷಣಾ ಜಾಮೀನು ಕೋರಿದ್ದೇಕೆ, ನಿರೀಕ್ಷಣಾ ಜಾಮೀನು ಅರ್ಜಿ ಏಕೆ ತಿರಸ್ಕೃತವಾಯಿತು ಎಂದು ಪ್ರಶ್ನಿಸಿದರು.
ಅಂಕಿತಾಗೆ ಮುಖ್ಯಮಂತ್ರಿ ಅಭಿನಂದನೆ
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರ ವಿದ್ಯಾರ್ಥಿನಿಯನ್ನು ಅಭಿನಂದಿಸಿದ ಮುಖ್ಯಮಂತ್ರಿ, ವಸತಿ ಶಾಲೆಗಳ ಇನ್ನಷ್ಟು ಮಕ್ಕಳು ರ‍್ಯಾಂಕ್ ಪಡೆಯಬೇಕು, ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು ಎಂದು ಆಶಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ.
ತಾವೂ ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ, ಇಂದು ಹೋಬಳಿಗೊಂದರಂತೆ 800ಕ್ಕೂ ಹೆಚ್ಚು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ ಎಂದರು.