ಮೈಸೂರು:ವಿರೋಧ ಪಕ್ಷಗಳವರು ಯಾರನ್ನೂ ಸಮಾಧಿ ಮಾಡಲು ಹೊರಟಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜಕೀಯವಾಗಿ ವಿರೋಧ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳು ನನ್ನನ್ನು ಸಮಾಧಿ ಮಾಡಲು ಹೊರಟಿವೆ, ನೀವು ನನ್ನನ್ನು ಕಾಪಾಡಬೇಕು ಎಂದು ಜನತೆಯಲ್ಲಿ ಮನವಿ ಮಾಡಿದ್ದಾರೆ, ಆದರೆ, ವಿರೋಧ ಪಕ್ಷಗಳು ಅವರನ್ನು ರಾಜಕೀಯವಾಗಿ ವಿರೋಧಿಸುತ್ತಿವೆ ಎಂದರು.
ನರೇಂದ್ರ ಮೋದಿ ಹತ್ತು ವರ್ಷ ಪ್ರಧಾನಿಗಳಾಗಿ ಬಡವರ ಪರವಾಗಿ ಏನೂ ಮಾಡಿಲ್ಲ, ಸುಳ್ಳಿನ ಸರದಾರ ಎನ್ನುವುದು ವಿರೋಧ ಪಕ್ಷಗಳ ಆರೋಪ, ಜನರಿಗೆ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ, ರಾಜಕೀಯವಾಗಿ ಅವರನ್ನು ಸೋಲಿಸಬೇಕೆನ್ನುವುದು ವಿರೋಧ ಪಕ್ಷಗಳ ಗುರಿ, ಏಕೆಂದರೆ ಬಡವರು ಹಾಗೂ ದೇಶ ಆರ್ಥಿಕ ಅಭಿವೃದ್ಧಿ ಆಗಿಲ್ಲ.
ಪ್ರಧಾನಿ ಭಾವನಾತ್ಮಕ ಆಟ
ಪ್ರಧಾನಿಗಳು ಸೋಲುತ್ತೇವೆಂದು ಹತಾಶರಾಗಿ ಈ ರೀತಿ ಮಾತನಾಡುತ್ತಿದ್ದಾರೆ, ಅವರ ಭಾವನಾತ್ಮಕ ಆಟ ಜನರಿಗೆ ಗೊತ್ತಾಗಿದೆ, ಸುಳ್ಳು ಹೇಳುವುದು, ಭಾವನಾತ್ಮಕವಾಗಿ ಶೋಷಣೆ ಮಾಡುವುದು ಜನರಿಗೆ ಗೊತ್ತಾದ ಮೇಲೆ ಜನ ಪುನಃ ಅದೇ ತಪ್ಪನ್ನು ಮಾಡುವುದಿಲ್ಲ.
ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ, ರಾಜ್ಯದಲ್ಲಿ ಬರಗಾಲ ಇದೆ ರೈತರ ಸಾಲ ಮನ್ನಾ ಮಾಡಿ ಎಂದಾಗ, ನಮ್ಮ ಬಳಿ ಹಣ ಪ್ರಿಂಟಿಂಗ್ ಮಶಿನ್ ಇಲ್ಲ ಎಂದಿದ್ದರು, ಈಗ ಸಾಲ ಮನ್ನಾ ಮಾಡಿ ಎನ್ನಲು ಯಾವ ನೈತಿಕತೆ ಇದೆ ಎಂದರು.