ಬೆಂಗಳೂರು:ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣ ಆರೋಪದ ಮೇಲೆ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಇಂದು ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
ಅಪಹರಣದ ಆರೋಪದ ಮೇಲೆ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿ, ಷರತ್ತು ಬದ್ಧ ಜಾಮೀನು ನೀಡಿತ್ತು.
ರಾತ್ರಿ ಬಿಡುಗಡೆ ಸಾಧ್ಯವಾಗಿರಲಿಲ್ಲ
ನ್ಯಾಯಾಲಯದ ತೀರ್ಪು ಸಂಜೆ ನಂತರ ಪ್ರಕಟಗೊಂಡಿದ್ದರಿಂದ ನಿಯಮಾವಳಿ ರೀತಿ ರಾತ್ರಿ ಅವರನ್ನು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ.
ರೇವಣ್ಣ ಪರ ವಕೀಲರು ಇಂದು ಜೈಲು ಅಧಿಕಾರಿಗಳಿಗೆ ನ್ಯಾಯಾಲಯದ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ ನಂತರ ಮಧ್ಯಾನ್ಹದ ನಂತರ ಬಿಡುಗಡೆ ಮಾಡಲಾಯಿತು.
ಬಿಡುಗಡೆಗೊಂಡ ರೇವಣ್ಣ ಅವರನ್ನು ಜೆಡಿಎಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೈಲಿನ ಹೊರಗೆ ಭಾರೀ ಸಂಭ್ರಮದಿಂದ ಸ್ವಾಗತಿಸಿದರು.
ಲಘು ಲಾಠಿ ಪ್ರಹಾರ
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.
ಜೈಲಿನಿಂದ ಬಿಡುಗಡೆಗೊಂಡ ರೇವಣ್ಣ ಯಾರ ಬಳಿಯೂ ಮಾತನಾಡದೆ, ನೇರವಾಗಿ ತಮ್ಮ ಸಹೋದರಿ ಮನೆಯಲ್ಲಿ ವಾಸವಿರುವ ತಮ್ಮ ತಂದೆ ದೇವೇಗೌಡ ಹಾಗೂ ತಾಯಿ ಚನ್ನಮ್ಮ ಅವರನ್ನು ಭೇಟಿ ಮಾಡಲು ತೆರಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಇಡೀ ಕುಟುಂಬ ರೇವಣ್ಣ ಅವರನ್ನು ಬರ ಮಾಡಿಕೊಂಡಿದ್ದಲ್ಲದೆ, ಇಡೀ ಕುಟುಂಬದವರು ಪರಸ್ಪರ ಸಮಾಲೋಚನೆ ನಡೆಸಿದರು.
ಕಳೆದ ಮೇ 4ರಂದು ದೇವೇಗೌಡರ ನಿವಾಸದಲ್ಲಿಯೇ ಎಸ್‌ಐಟಿ ಅಧಿಕಾರಿಗಳಿಂದ ರೇವಣ್ಣ ಬಂಧನಕ್ಕೊಳಗಾಗಿದ್ದರು.