ಇದೆಲ್ಲದರ ಹಿಂದೆ ಸರ್ಕಾರದ ದೊಡ್ಡ ತಿಮಿಂಗಿಲ !
ಬೆಂಗಳೂರು:ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇದೆಲ್ಲದರ ಹಿಂದೆ ಸರ್ಕಾರದಲ್ಲಿರುವ ದೊಡ್ಡ ತಿಮಿಂಗಿಲ ಇದೆ ಎಂದು ಗುಡುಗಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ತರಲು ಈ ರೀತಿ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದರು.
ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ನಡೆದ ವಾದ-ಪ್ರತಿವಾದದಿಂದ ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಮತ್ತು ನಮ್ಮ ಕುಟುಂಬವನ್ನು ಗುರಿಯಾಗಿಟ್ಟುಕೊಂಡಿದ್ದು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.
ತಪ್ಪು ಮಾಡದವರನ್ನು ಶಿಕ್ಷಿಸಿ, ಆರೋಪಿಗಳನ್ನು ಬಂಧಿಸದಿರುವುದಕ್ಕೇ ಸರ್ಕಾರದಲ್ಲಿರುವ ದೊಡ್ಡ ತಿಮಿಂಗಲವೇ ಕಾರಣ ಎಂದು ಶಿವಕುಮಾರ್ ಹೆಸರೇಳದೇ ಅವರ ವಿರುದ್ಧ ಹರಿಹಾಯ್ದರು.
ತೇಜೋವಧೆ ಮಾಡಲು ಸಭೆ
ಅಷ್ಟೇ ಅಲ್ಲ, ದೊಡ್ಡ ತಿಂಮಿಂಗಲ, ನನ್ನ ತೇಜೋವಧೆ ಮಾಡಲು ಮಂಡ್ಯದ ಐದು ಚಿಕ್ಕ ತಿಮಿಂಗಲಗಳ ಜೊತೆ ಸಭೆ ನಡೆಸಿ, ಅವರ ಬಾಯಿಂದ ಆರೋಪಗಳನ್ನು ಮಾಡಿಸುತ್ತಿದ್ದಾರೆ.
ನನ್ನದು ತೆರೆದ ಪುಸ್ತಕ, ಮಾಡಿದ ತಪ್ಪನ್ನು ವಿಧಾನಸಭೆಯಲ್ಲೇ ಒಪ್ಪಿಕೊಂಡಿದ್ದೇನೆ, ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಕಷ್ಟವನ್ನೂ ಕೊಟ್ಟಿಲ್ಲ, ಆದರೆ ನಾನು ಕಷ್ಟ ಅನುಭವಿಸಿದ್ದೇನೆ, ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ತಿಮಿಂಗಲಗಳಿಗೆ ಸವಾಲು ಹಾಕಿದರು.
ಮಾಹಿತಿ ತಂತ್ರಜ್ಞಾನ ಯುಗ ಬೆಳೆಯುತ್ತಿದ್ದಂತೆ ಇಂತಹ ಸಿಡಿಗಳ ಜಾಲಕ್ಕೆ ಸಿಲುಕಿ ಕುಟುಂಬಗಳು ನಾಶವಾಗುತ್ತಿವೆ, ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಇಂತಹ ಪ್ರಕರಣಗಳಿಗೆ ಇತಿಶ್ರೀ ಹಾಡಲು ಎಸ್‌ಐಟಿ ಪ್ರಮಾಣಿಕ ತನಿಖೆ ನಡೆಸಿ, ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು.
ಆರೋಪಿಯನ್ನು ಕರೆತರಲಿ
ಮಕ್ಕಳು ದಾರಿ ತಪ್ಪಿದರೆ ತಂದೆ-ತಾಯಿ ಏನೂ ಮಾಡಲು ಸಾಧ್ಯವಿಲ್ಲ, ಪ್ರಜ್ವಲ್ ರೇವಣ್ಣ ಅವರನ್ನು ವಹಿಸಿಕೊಂಡು ಮಾತನಾಡುವ ಪ್ರಶ್ನೆಯೇ ಇಲ್ಲ, ರೆಡ್ ಕಾರ್ನರ್, ಬ್ಲೂಕಾರ್ನರ್ ಎಂದು ಹೇಳಿಕೊಂಡು ಕಾಲ ಕಳೆಯುವ ಬದಲು ಗೃಹ ಸಚಿವ ಡಾ.ಪರಮೇಶ್ವರ್ ದೆಹಲಿಗೆ ತೆರಳಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಆರೋಪಿಯನ್ನು ಕರೆತರಲಿ.
ಅದನ್ನು ಬಿಟ್ಟು ಗೌಡರ ಕುಟುಂಬಕ್ಕೆ ಮಸಿ ಬಳಿಯಬೇಕೆಂಬ ಉದ್ದೇಶದಿಂದಲೇ ದೊಡ್ಡ ತಿಮಿಂಗಲದ ಮಾತು ಕೇಳಿಕೊಂಡು ಸರ್ಕಾರಕ್ಕೆ ಮಸಿ ಬಳಿದುಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಸಂತ್ರಸ್ತೆಯೊಬ್ಬರು ಕೇಂದ್ರ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಪ್ರಕರಣವನ್ನು ತನಿಖೆ ಮಾಡಿದ್ದೀರಾ ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ಎಸ್‌ಐಟಿ ಮುಂದಿಟ್ಟುಕೊಂಡು ನೀವು ನಮ್ಮ ಕುಟುಂಬದವರ ಮೇಲೆ ಗುರಿ ಮಾಡಿಕೊಂಡು ದಾಳಿ ಮಾಡುತ್ತಿದ್ದೀರಿ, ಇದು ನಿಮಗೆ ತಿರುಗುಬಾಣವಾಗುತ್ತದೆ.
ಲೋಕಸಭಾ ಚುನಾವಣಾ ಮತದಾನಕ್ಕೂ ಮುನ್ನ ಪೆನ್‌ಡ್ರೈವ್ ಹಂಚಿ ಮಹಿಳೆಯರ ಮಾನ ತೆಗೆದ ಆರೋಪಿಗಳನ್ನು ಇದುವರೆಗೂ ಏಕೆ ಬಂಧಿಸಿಲ್ಲ.
ಗೃಹ ಸಚಿವರಿಗೆ ತರಾಟೆ
ಇದರ ಹಿಂದೆ ಇರುವ ದೊಡ್ಡ ತಿಮಿಂಗಲವನ್ನು ಪ್ರಶ್ನೆ ಮಾಡುವ ತಾಕತ್ತು ನಿಮಗಿದೆಯೇ ಎಂದು ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲವೂ ಬಯಲಾಗುತ್ತದೆ, ತಪ್ಪಿತಸ್ತರಿಗೆ ಶಿಕ್ಷೆ ಕಾದಿದೆ, ಸ್ವಲ್ಪ ಕಾದು ನೋಡಿ ಎಂದರು.
ನಮ್ಮ ಬಳಿ ಪೆನ್‌ಡ್ರೈವ್ ಇರುವುದು ಅಶ್ಲೀಲ ಪೆನ್‌ಡ್ರೈವ್ ಅಲ್ಲ, ವರ್ಗಾವರ್ಗಿಗೆ ಸಂಬಂಧಿಸಿದ ದಾಖಲೆ.
ತಪ್ಪಿತಸ್ತರ ವಿರುದ್ಧ ಮುಖ್ಯಮಂತ್ರಿ ಅವರು ಕ್ರಮ ಕೈಗೊಳ್ಳುತ್ತೇನೆ ಎಂದರೆ ಅದನ್ನು ಬಹಿರಂಗ ಪಡಿಸುತ್ತೇನೆ.
ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ
ವಕೀಲರಾದ ದೇವರಾಜೇಗೌಡರನ್ನು ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ್ದು ಏಕೆ, ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು, ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ ಎಂದು ಅವರು ಅತೃಪ್ತಿ ವ್ಯಕ್ತಪಡಿಸಿದರು.
ವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರಕಾರಕ್ಕೆ ಅನುಕಂಪ ಎನ್ನುವುದು ಇದೆಯೇ, ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆ ಇಲ್ಲ, ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಅಪರಾಧಿ ನಿರಪರಾಧಿ ಆಗುತ್ತಾನೆ, ಸರಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ, ಅದನ್ನು ಬಿಟ್ಟು ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲ ಎಂದರು.
ಕೆಲವೇ ದಿನಗಳಲ್ಲಿ ಇದೆಲ್ಲಾ ಹೊರಗೆ ಬರಲಿದೆ, ಮಹಿಳೆಯರಿಗೆ ಬೆದರಿಸಿದ್ದು, ಧಮ್ಕಿ ಹಾಕಿದ್ದು ಎಲ್ಲವೂ ಆಚೆ ಬರಲಿದೆ, ನೀವು ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಗೃಹ ಸಚಿವರೇ ಎಂದು ಡಾ.ಜಿ.ಪರಮೇಶ್ವರ್ ಅವರನ್ನು ನೇರವಾಗಿ ಪ್ರಶ್ನಿಸಿದರು.
ಹಾಸನದಲ್ಲಿ ಪೆನ್‌ಡ್ರೈವ್‌ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ, ಎಫ್‌ಐಆರ್ ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ ಎಸ್‌ಐಟಿ ಹಿಡಿಯಲಿಲ್ಲ, ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧನ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದರು.