ನೀತಿ ಸಂಹಿತೆಯಿಂದ ಅಭಿವೃದ್ಧಿಗೆ ಹಿನ್ನಡೆ
ಬೆಂಗಳೂರು: ಕರ್ನಾಟಕಕ್ಕೆ ಒಂದಲ್ಲಾ ಒಂದು ಚುನಾವಣೆಗಳು ಮೇಲಿಂದೆರಗಿ ಮಾದರಿ ನೀತಿಸಂಹಿತೆ ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗಿದೆ.
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡು ಹಂತದ ಮತದಾನ ಮುಗಿಯುತ್ತಿದ್ದಂತೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ತೆರವಾಗುತ್ತಿರುವ ಆರು ಸ್ಥಾನಗಳಿಗೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿದೆ.
ಇದರ ನಡುವೆ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳು ಜುಲೈ 17ಕ್ಕೆ ತೆರವಾಗಲಿದ್ದು, ಈ ಸ್ಥಾನಗಳಿಗೂ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವ ವೇಳೆ ಸನ್ನಿಹಿತವಾಗಿದೆ.
ಹನ್ನೊಂದು ಸ್ಥಾನಗಳ ಜೊತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (ಕಾಂಗ್ರೆಸ್) ಅವರಿಂದ ತೆರವಾದ ಅಲ್ಪಾವಧಿಯ ಒಂದು ಸ್ಥಾನದ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಬೀಳಲಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಶೆಟ್ಟರ್ ಅವರಿಗೆ ಪಕ್ಷ ಈ ಸ್ಥಾನ ಕಲ್ಪಿಸಿತ್ತು. ನಂತರ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವ ಸಮಯದಲ್ಲಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು, ಇದರಿಂದಾಗಿ ತೆರವಾಗಿರುವ ಈ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ.
ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡ ನಂತರ 11 ಸ್ಥಾನಗಳಿಗೆ ಆಯೋಗ ಚುನಾವಣೆ ನಡೆಸಲು ಸಿದ್ಧತೆ ಬೆನ್ನಲ್ಲೇ, ಈ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ನಲ್ಲಿ ಪೈಪೋಟಿ ಆರಂಭಗೊಂಡಿದೆ.
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಆಡಳಿತಾರೂಢ ಕಾಂಗ್ರೆಸ್, 11 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಗಳಿಸಲು ಅವಕಾಶ ಇದೆ. ಉಳಿದ ನಾಲ್ಕರಲ್ಲಿ ಬಿಜೆಪಿಗೆ ಮೂರು ಹಾಗೂ ಜೆಡಿಎಸ್‌ಗೆ ಒಂದು ಸ್ಥಾನ ಸುಲಭವಾಗಿ ಲಭ್ಯವಾಗಲಿದೆ.
ಡಾ.ತೇಜಸ್ವಿನಿಗೌಡ ಹಾಗೂ ಕೆ.ಪಿ.ನಂಜುಂಡಿ ಕಳೆದ ಬಾರಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡಿದ್ದರು.
ಬದಲಾದ ಸನ್ನಿವೇಶದಲ್ಲಿ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿರುವ ಎನ್.ಎಸ್.ಬೋಸರಾಜ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಅರವಿಂದ ಕುಮಾರ್ ಅರಳಿ, ಕೆ.ಹರೀಶ್ ಕುಮಾರ್ (ಕಾಂಗ್ರೆಸ್).
ಬಿ.ಎಂ.ಫಾರೂಕ್ (ಜೆಡಿಎಸ್), ರಘುನಾಥರಾವ್ ಮಲ್ಕಾಪೂರೆ, ಎನ್.ರವಿಕುಮಾರ್, ಎಸ್.ರುದ್ರೇಗೌಡ, ಹಾಗೂ ಮುನುರಾಜೂಗೌಡ (ಬಿಜೆಪಿ) ಇವರ ಸದಸ್ಯಾವಧಿ ಜುಲೈ 17 ಕ್ಕೆ ಪೂರ್ಣಗೊಳ್ಳಲಿದೆ.
ನಿವೃತ್ತಗೊಳ್ಳುವ ಸದಸ್ಯರಲ್ಲಿ ಆಯಾ ಪಕ್ಷ ಎಷ್ಟು ಮಂದಿಗೆ ಮತ್ತೆ ಅವಕಾಶ ಮಾಡಿಕೊಡುತ್ತದೋ ತಿಳಿಯದು.
ಆದರೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಸ್ಥಾನ ಪಡೆಯಲು ಭಾರಿ ಪೈಪೋಟಿಯೇ ನಡೆದಿದೆ.
ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ದೊರೆಯದ ಮುಖಂಡರುಗಳಿಗೆ ಪಕ್ಷಗಳ ನಾಯಕರು ವಿಧಾನ ಪರಿಷತ್ ಕಡೆ ಬೊಟ್ಟು ತೋರಿಸಿದ್ದರು.
ತದನಂತರ ಚುನಾವಣೆಯಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಬಿಜೆಪಿ ಹಾಗೂ ಜೆಡಿಎಸ್‌ನಿಂದ ಹಲವು ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಅದರಲ್ಲಿ ಕೆಲವರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ, ಬಿಜೆಪಿಯೂ ಭರವಸೆಗಳಿಂದ ಹೊರತಾಗಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಎದ್ದ ಕೆಲವರಿಗೆ ವಿಧಾನ ಪರಿಷತ್ತಿನ ಕಡೆ ಬೊಟ್ಟು ಮಾಡಿ ತೋರಿಸಿದೆ.
ಆ ಪಕ್ಷಕ್ಕೆ ದೊರೆಯುವ ಮೂರು ಸ್ಥಾನಗಳಲ್ಲಿ ನಿವೃತ್ತರಾಗಲಿರುವ ಕೆಲವು ಪ್ರಭಾವಿಗಳಿಗೂ ಅವಕಾಶ ಮಾಡಿಕೊಡುತ್ತಾರೋ ಕಾದು ನೋಡಬೇಕು. ಇನ್ನು ಜೆಡಿಎಸ್‌ಗೆ ಒಂದು ಸ್ಥಾನವಿದ್ದು ಆ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕೆಲವರಿಗೆ ಭರವಸೆ ನೀಡಿದ್ದಾರೆ, ಇವರಲ್ಲಿ ಯಾರಿಗೆ ಅವಕಾಶ ದೊರೆಯಲಿದೆ ಕಾದು ನೋಡಬೇಕಿದೆ.