ಬೆಂಗಳೂರು:ಬರ ನಿರ್ವಹಣೆ ಹಾಗೂ ಕಾನೂನು ಪರಿಸ್ಥಿತಿ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನೌಪಚಾರಿಕ ಸಭೆ ಕರೆದಿದ್ದಾರೆ.
ಲೋಕಸಭಾ ಚುನಾವಣಾ ಮಾದರಿ ನೀತಿ ಸಂಹಿತೆ ಅಡಿ ಮುಖ್ಯಮಂತ್ರಿ ಅವರು, ಯಾವುದೇ ಸರ್ಕಾರಿ ಮಟ್ಟದ ಸಭೆ ಕರೆಯಲಾಗದ ಕಾರಣ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಈ ಅನೌಪಚಾರಿಕ ಸಭೆ ಕರೆದಿದ್ದಾರೆ.
ಮುಂಗಾರು ಮಳೆ ತಡ
ಮುಂಗಾರು ಮಳೆ ತಡವಾಗಿರುವುದರಿಂದ ರಾಜ್ಯದೆಲ್ಲೆಡೆ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಅಗಾಧವಾಗಿ ಕಾಡಿದೆ.
ಮತ್ತೊಂದೆಡೆ ಸಣ್ಣ-ಪುಟ್ಟ ಕಾರಣಗಳಿಗಾಗಿ ಹೆಣ್ಣು ಮಕ್ಕಳ ಕೊಲೆ ನಡೆಯುತ್ತಿದೆ, ಚುನಾವಣಾ ನೆಪ ಮುಂದೊಡ್ಡಿ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆಗಳು ದಿನೇ ದಿನೇ ಉಲ್ಬಣಗೊಳ್ಳುತ್ತಿವೆ.
ಬರ ಪರಿಹಾರ ನಿರ್ವಹಣೆ ಹಾಗೂ ತುರ್ತು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರು ಚುನಾವಣಾ ಆಯೋಗಕ್ಕೆ ಬರೆದ ಪತ್ರಕ್ಕೆ ಸಮ್ಮತಿ ದೊರೆತಿಲ್ಲ.
ಮುಖ್ಯಕಾರ್ಯದರ್ಶಿ ಅಧ್ಯಕ್ಷತೆ ಸಭೆ
ಈ ಕಾರಣಕ್ಕಾಗಿ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲೇ ವಿಧಾನಸೌಧದಲ್ಲಿ ಇಲಾಖಾ ಪ್ರಧಾನಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಆಯ್ದ ಸಚಿವರ ಸಭೆಯನ್ನು ಕರೆಯಲಾಗಿದೆ.
ಬರ ಹಾಗೂ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಲಹೆ ನೀಡುವ ಮುಖ್ಯಮಂತ್ರಿ ಅವರು, ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಸೂಚಿಸಲಿದ್ದಾರೆ.
ಪ್ರಸಕ್ತ ಮುಂಗಾರು ಮೇ 30ರಂದು ಕೇರಳ ಪ್ರವೇಶಸಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.
ಇನ್ನು 15 ದಿನಗಳ ಕಾಲ ಮಳೆ ಬೀಳದಿದ್ದರೆ ಕುಡಿಯುವ ನೀರು ಹಾಗೂ ಮೇವಿಗೆ ಭಾರೀ ತೊಂದರೆಯಾಗುತ್ತದೆ, ಇತ್ತ ಗಮನ ಹರಿಸಿ ಎಂದು ತಿಳಿಸಲಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಬಿಗಿ ಕ್ರಮ
ಕಾನೂನು ಸುವ್ಯವಸ್ಥೆ ಬಗ್ಗೆ ಬಿಗಿ ಕ್ರಮ ಕೈಗೊಳ್ಳಿ, ಸಣ್ಣ-ಪುಟ್ಟ ಕಾರಣಗಳಿಗೆ ಕೊಲೆಗಳು ನಡೆಯುತ್ತಿವೆ, ಇದನ್ನು ಹತ್ತಿಕ್ಕಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ.
ಕಳೆದ ಮುಂಗಡಪತ್ರದಲ್ಲಿ ಪ್ರಕಟಗೊಂಡಿರುವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಸಿದ್ಧತೆ ಮಾಡಿಕೊಳ್ಳಿ, ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆ ಆದೇಶಗಳು ಹೊರಬಂದು ಯುದ್ಧೋಪಾದಿಯಲ್ಲಿ ಕೆಲಸ ಮಾಡಲು ಸಜ್ಜಾಗಿ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಲಿದ್ದಾರೆ.
ನಾವು ಯಾವುದೇ ಆದೇಶ ಮತ್ತು ಸಲಹೆಗಳನ್ನು ಈ ಸಮಯದಲ್ಲಿ ನೀಡಲು ಸಾಧ್ಯವಿಲ್ಲ, ಆದರೆ, ನೀವು, ನಿಮ್ಮ ಇತಿಮಿತಿಯಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಲು ಅವಕಾಶವಿದೆ.
ಬರದಿಂದ ತತ್ತರಿಸಿರುವ ಗ್ರಾಮೀಣ ಭಾಗದ ಕಡೆ ಗಮನ ಹರಿಸಿ, ಕೇಂದ್ರದಿಂದ ಬಿಡುಗಡೆಯಾಗಿರುವ ಬೆಳೆ ಪರಿಹಾರದ ಹಣ ಎಲ್ಲಾ ರೈತರ ಖಾತೆಗೆ ತಲುಪಿದೆಯೇ ಎಂಬ ಮಾಹಿತಿ ಪಡೆದುಕೊಳ್ಳುವಂತೆಯೂ ಸೂಚಿಸಲಿದ್ದಾರೆ.
ನಾಳಿನ ಸಭೆಗೆ ಅಧಿಕಾರಿಗಳಲ್ಲದೆ, ಕಂದಾಯ, ಕೃಷಿ, ಪೌರಾಡಳಿತ, ಗೃಹ, ನಗರಾಭಿವೃದ್ಧಿ, ಗ್ರಾಮೀಣ ಮತ್ತು ಪಂಚಾಯತ್ ರಾಜ್ ಸಚಿವರಲ್ಲದೆ, ಸಂಪುಟದ ಹಿರಿಯ ಸಹೋದ್ಯೋಗಿಗಳಿಗೂ ಬರುವಂತೆ ಆಹ್ವಾನಿಸಲಾಗಿದೆ.