ವಕೀಲ ದೇವರಾಜೇಗೌಡ ಹೊಸ ಬಾಂಬ್
ಬೆಂಗಳೂರು: ರಾಜ್ಯ ಮತ್ತು ರಾಷ್ಟ್ರದಲ್ಲಿ ತೀವ್ರ ಸಂಚಲವನ್ನುಂಟು ಮಾಡಿರುವ ಅಶ್ಲೀಲ ವಿಡಿಯೋವಿದೆ ಎನ್ನಲಾದ ಪೆಂಡ್ ಡ್ರೈವ್ ರೆಡಿ ಮಾಡಿದವರು ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಆರೋಪ ಮಾಡಿರುವ ವಕೀಲ ದೇವರಾಜೇಗೌಡ ಅವರು ನನಗೆ ನೂರು ಕೋಟಿ ರೂ. ಆಫರ್ ನೀಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿರುವ ಅವರು, ಕಾರು ಚಾಲಕರಾಗಿದ್ದ ಕಾರ್ತಿಕ್ ಅವರಿಂದ ಪೆನ್ ಡ್ರೈವ್ ತರಿಸಿಕೊಂಡು ಶಿವಕುಮಾರ್ ರೆಡಿ ಮಾಡಿದರು. ಪೆನ್ ಡ್ರೈವ್ ವಿಚಾರವನ್ನು ಹ್ಯಾಂಡಲ್ ಮಾಡಲು ನಾಲ್ವರು ಸಚಿವರ ತಂಡ ರಚನೆ ಮಾಡಿದ್ದರು.
ತಂಡದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಹಾಗೂ ಮತ್ತೊಬ್ಬ ಸಚಿವರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದೊಂದು ದೊಡ್ಡ ಹಗರಣವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಬಿಜೆಪಿಗೆ ಕೆಟ್ಟ ಹೆಸರು ತರಲು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡಲು ಆಫರ್ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಮಾಜಿ ಸಂಸದ ಶಿವರಾಮೇಗೌಡರ ಮೂಲಕ ಆಫರ್ ನೀಡಿದ್ದರು. ಚನ್ನರಾಯ ಪಟ್ಟಣದ ಗೋಪಾಲಸ್ವಾಮಿ ಅವರನ್ನು ಸಂಧಾನಕ್ಕೆ ಕಳುಹಿಸಿದ್ದರು ಎಂದು ಹೇಳಿದ್ದಾರೆ.
ಅಲ್ಲದೆ, ಬೆಂಗಳೂರಿನ ಬೌರಿಂಗ್ ಕ್ಲಬ್ ನ ರೂಂ 110ಕ್ಕೆ ಮುಂಗಡವಾಗಿ ಐದು ಕೋಟಿ ರೂ. ಕಳುಹಿಸಿದ್ದರು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ.
ನನ್ನ ವಿರುದ್ಧ ದಾಖಲಿಸಿದ ಜಾತಿನಿಂದನೆ ಆರೋಪದ ಪ್ರಕರಣದಲ್ಲಿ ಅಗತ್ಯ ದಾಖಲೆಗಳು ಸಿಗಲಿಲ್ಲ. ರೇಪ್ ಆರೋಪದ ಪ್ರಕರಣದಲ್ಲೂ ದಾಖಲೆ ಸಿಕ್ಕಿಲ್ಲ. ನನ್ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಪೆನ್ ಡ್ರೈವ್ ಸೀಜ್ ಮಾಡಿದ್ದಾರೆ.
ಆ ಪೆನ್ ಡ್ರೈವ್ ಕಾರ್ತಿಕ ಮನೆಯ ಸಿಸಿ ಟಿವಿಯ ಪುಟೇಜ್ ಗೆ ಸಂಬಂಧಿಸಿದ್ದು, ಅದರಲ್ಲಿ ಕಾರ್ತಿಕ ಅವರ ಹೆಂಡತಿಯ ಕಿಡ್ನಾಪ್ ಗೆ ಸಂಬಂಧಿಸಿದ ಪೆನ್ ಡ್ರೈವ್ ಆಗಿದ್ದು, ಅದನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ದೇವರಾಜೇಗೌಡ ಹೊಸ ಬಾಂಬ್ ಸಿಡಿಸುತ್ತಿದ್ದಂತೆ ಜಾತ್ಯತೀತ ಜನತಾದಳ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸತ್ಯ ಕೊನೆಗೂ ಬಯಲಾಗಿದೆ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೆಟ್ಟ ಹೆಸರು ತರುವ ಸಂಚು ಸಾಕಾರಗೊಳಿಸಲು ಸಿಡಿ ಶಿವಕುಮಾರ್ ಸಾಹೇಬರು, ವಕೀಲ ದೇವರಾಜೇಗೌಡರಿಗೆ ಆಫರ್ ಮಾಡಿರುವುದು ಬರೋಬರಿ ನೂರು ಕೋಟಿ ಎಂದು ಹೇಳಿದೆ.
ಸಿಡಿ ಶಿವಕುಮಾರ್, ಪೆನ್ ಡ್ರೈವ್ ಗ್ಯಾಂಗ್ ಹಾಗೂ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ(ಎಸ್ಐಟಿ) ಎಂದು ಆಪಾದಿಸಿದೆ.