ಬೆಂಗಳೂರು:ಹುಬ್ಬಳ್ಳಿ-ಧಾರವಾಡದಲ್ಲಿ ಪದೇ ಪದೇ ಸಂಭವಿಸುತ್ತಿರುವ ಕೊಲೆ ಪ್ರಕರಣಗಳ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಎಡಿಜಿಪಿ ಅವರಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೇ ಕೊಲೆ ಘಟನೆಗಳು ಸಂಭವಿಸುತ್ತಿವೆ, ಇದಕ್ಕೆ ಕಾರಣ ಏನು, ಯಾವ ವಿಷಯ ಎಂಬುದನ್ನು ಗುರುತಿಸಿ ವರದಿ ಸಲ್ಲಿಸಲಿದ್ದಾರೆ, ಬಳಿಕ ಸಾಧ್ಯವಾದರೆ ತಾವು ಹೋಗಿ ಬರುವುದಾಗಿ ಹೇಳಿದರು.
ಕಾನೂನು ಪ್ರಕಾರ ಕಠಿಣ ಶಿಕ್ಷೆ
ಯುವತಿ ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ, ಇದರಲ್ಲಿ ಯಾವುದೇ ಮುಲಾಜಿಲ್ಲ.
ಪೊಲೀಸರ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗಿದೆ, ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕೊ ಅವೆಲ್ಲವನ್ನು ಮಾಡುತ್ತೇವೆ.
ಪೋಷಕರು ಲಿಖಿತ ದೂರು ಕೊಟ್ಟಿಲ್ಲ, ಆದರೆ ವಿಷಯವನ್ನು ತಿಳಿಸಿದ್ದರು ಎಂಬ ವರದಿ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ
ಪೋಷಕರು ನಿಜವಾಗಿಯೂ ವಿಷಯ ತಿಳಿಸಿದ್ದರೆ, ಇಲ್ಲವೇ ಎಂಬ ಕುರಿತು ತನಿಖೆ ನಡೆಯುತ್ತಿದೆ, ಇದರಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಎಸ್‌ಐಟಿ ರಿಪೋರ್ಟ್ ಮಂಡ್ಯ ಶಾಸಕರಿಗೆ ಹೋಗುತ್ತಿದೆ, ಗೃಹ ಸಚಿವರಿಗೆ ತಲುಪುತ್ತಿಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ, ಇಂತಹ ವಿಚಾರಗಳನ್ನು ಸಾರ್ವಜನಿಕ ವಲಯಕ್ಕೆ ತರುವುದು ಸರಿಯಲ್ಲ ಎಂಬುದು ಅವರಿಗೂ ಚೆನ್ನಾಗಿ ಗೊತ್ತಿದೆ, ತನಿಖೆ ನಡೆಯುತ್ತಿದೆ.
ಮಂಡ್ಯ ಶಾಸಕರಿಗೆ ಯಾರು ಬ್ರೀಫಿಂಗ್ ಮಾಡುತ್ತಾರೆ, ಈ ರೀತಿ ಸುಮ್ಮನೆ ಹೇಳೋದು ಸುಲಭ, ನಮಗೂ ಜವಾಬ್ದಾರಿ ಇದೆ, ಯಾವ ಮುಲಾಜಿಗೂ ಕೂಡ ಒಳಪಡುವುದಿಲ್ಲ, ಇದನ್ನು ಕುಮಾರಸ್ವಾಮಿ ಅವರಿಗೂ ಹೇಳಬಯಸುತ್ತೇನೆ.
ಎಸ್‌ಐಟಿ ಸಮರ್ಥ ಕೆಲಸ
ಎಸ್‌ಐಟಿ ಸಮರ್ಥವಾಗಿ ಕೆಲಸ ಮಾಡುತ್ತಿದೆ, ನನಗಾಗಲಿ ಅಥವಾ ಮುಖ್ಯಮಂತ್ರಿ ಅವರಿಗಾಗಲಿ ಯಾವುದನ್ನು ಬ್ರೀಫಿಂಗ್ ಮಾಡಬೇಕೋ ಅದನ್ನು ಎಸ್‌ಐಟಿ ಮಾಡುತ್ತದೆ.
ಸಂಸದ ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತರುವ ಪ್ರಕ್ರಿಯೆ ನಡೆಯುತ್ತಿದೆ, ಅವರನ್ನು ಕರೆತಂದ ಮೇಲೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಕೊರಟಗೆರೆ ಕ್ಷೇತ್ರದ ವ್ಯಕ್ತಿ ಜನರಿಂದ ಹಣ ಪಡೆದು ವಂಚಿಸಿದ್ದಾನೆ, ಪೊಲೀಸರು ಆತನನ್ನು ಬಂಧಿಸಿದ್ದಾರೆ, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.