ಬೆಂಗಳೂರು:ಯಾವ ಸಮುದಾಯಕ್ಕೂ ಸಮಸ್ಯೆ ಆಗದ ರೀತಿಯಲ್ಲಿ ಜಾತಿ ಗಣತಿ ವರದಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ತಮ್ಮ ಆಡಳಿತಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ ಗಣತಿ ವರದಿಯನ್ನು ಸಂಪುಟದ ಮುಂದಿಟ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಗಣತಿ ವರದಿ ಜಾರಿಗೊಳಿಸುವುದರಿಂದ ಯಾವ ಜಾತಿ, ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ, ಒಂದು ವೇಳೆ ಆದರೆ, ಅದನ್ನು ಸರಿಪಡಿಸುವುದಾಗಿಯೂ ತಿಳಿಸಿದರು.
ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ
ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಇಂತಹ ವರದಿಗಳಿಂದಲೇ ಗುರುತಿಸಿ ಆ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ.
ವರದಿಯೇ ಬೇಡ ಎಂದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಕಿಸಿಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಾನು ಹಿಂದೆ ಅಧಿಕಾರದಲ್ಲಿದ್ದಾಗ, ಹಿಂದುಳಿದ ವರ್ಗಗಳ ಆಯೋಗ ರಚಿಸಿದೆ, ಅವರು ವರದಿ ಕೊಡುವ ಸಂದರ್ಭದಲ್ಲಿ ಅಧಿಕಾರ ಕಳೆದುಕೊಂಡೆ, ನಂತರ ಬಂದ ಸರ್ಕಾರಗಳು ವರದಿಯನ್ನು ಜಾರಿಗೊಳಿಸಲಿಲ್ಲ.
ಈಗ ಮತ್ತೆ ನಾನೇ ಅಧಿಕಾರದಲ್ಲಿದ್ದೇನೆ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರೆಕಿಸುವುದಾಗಿ ಹೇಳುವುದರ ಮೂಲಕ ಪರೋಕ್ಷವಾಗಿ ವರದಿ ಜಾರಿಗೊಳಿಸುವ ಬಗ್ಗೆ ತಿಳಿಸಿದರು.
ಗ್ಯಾರಂಟಿಗಳು ಮನೆ ಮನೆ ತಲುಪಿವೆ.
ಬಿಜೆಪಿಯ ನಿರಂತರ ಅಪಪ್ರಚಾರದ ನಡುವೆಯೂ ಗ್ಯಾರಂಟಿಗಳು ಜನರ ಮನೆ ಮನೆ ತಲುಪಿವೆ, ಗ್ಯಾರಂಟಿಗಳ ಹೊರತಾಗಿ ಅಭಿವೃದ್ಧಿಗೂ ಹಣ ಮೀಸಲಿಟ್ಟು ಖರ್ಚು ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ವಿಜಯೇಂದ್ರ, ಆರ್.ಅಶೋಕ್‌ಗೆ ಆರ್ಥಿಕತೆ ಅರ್ಥ ಆಗಲ್ಲ, ಹೀಗಾಗಿ ಖಜಾನೆ ಖಾಲಿ ಆಗಿದೆ ಎಂದು ಪರಮ ಸುಳ್ಳು ಹೇಳುತ್ತಿದ್ದಾರೆ, ನಾವು ಗ್ಯಾರಂಟಿಯೇತರ ಅಭಿವೃದ್ಧಿ ಕಾರ್ಯಗಳಿಗೆ 54,374 ಕೋಟಿ ರೂ. ಖರ್ಚು ಮಾಡುವುದಾಗಿ ಬಜೆಟ್‌ನಲ್ಲಿ ಹೇಳಿದ್ದೆವು. ಆದರೆ 56,274 ಕೋಟಿ ಖರ್ಚು ಮಾಡಿದೆವು. ಅಂದರೆ ಬಜೆಟ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ದೇವೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು.
ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲೀಮರಿಗೆ ಕೊಡ್ತಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಸುಳ್ಳು ಹೇಳುತ್ತಿದ್ದಾರೆ, ಇದು ಅಪ್ಪಟ ಸುಳ್ಳು.
ಜನರ ದಿಕ್ಕು ತಪ್ಪಿಸುವುದನ್ನು ಬಿಜೆಪಿ ನಿಲ್ಲಿಸಲಿ
ಚುನಾವಣೆಯಲ್ಲಿ ಜನರನ್ನು ರೊಚ್ಚಿಗೆಬ್ಬಿಸಿ, ದಿಕ್ಕು ತಪ್ಪಿಸುವುದನ್ನು ಬಿಜೆಪಿ ಮತ್ತು ಮೋದಿ ನಿಲ್ಲಿಸಬೇಕು, ಜನ ಬಿಜೆಪಿಯ ಸುಳ್ಳುಗಳ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಎಂದರು.
ಆರೋಗ್ಯ, ಶಿಕ್ಷಣ, ನೀರಾವರಿ, ಸಮಾಜ ಕಲ್ಯಾಣ, ಕೃಷಿ ಸೇರಿ ಎಲ್ಲಾ ಇಲಾಖೆಗಳಲ್ಲೂ ಅಭಿವೃದ್ಧಿ ಕೆಲಸಗಳು ಯಥೇಚ್ಛವಾಗಿ ನಡೆಯುತ್ತಿವೆ ಎಂದು ವಿವರಿಸಿದರು.
ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ನರಳುತ್ತಿದ್ದ ಮಧ್ಯಮ ವರ್ಗ ಮತ್ತು ಬಡವರ ಕೊಳ್ಳುವ ಶಕ್ತಿ ಹೆಚ್ಚಿಸಲು ಗ್ಯಾರಂಟಿಗಳನ್ನು ಜಾರಿ ಮಾಡಿದೆವು.
ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆ, ಗ್ಯಾರಂಟಿಗಳ ಜಾರಿಗೆ ಕ್ರಮ ತೆಗೆದುಕೊಂಡು ಐದಕ್ಕೆ ಐದೂ ಜಾರಿ ಮಾಡಿದ್ದೇವೆ.
40% ಕಮಿಷನ್ ಆರೋಪ ತನಿಖೆ
ನಮ್ಮ ಕಾಲದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿಂತಿದೆ ಎಂದು ಹೇಳೋದಿಲ್ಲ, ಆದರೆ, ಇದರ ಪ್ರಮಾಣ ಕಡಿಮೆ ಮಾಡಲು ನಿಷ್ಠುರವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ, 40% ಕಮಿಷನ್ ಆರೋಪ ಕುರಿತ ತನಿಖೆ ಶುರು ಮಾಡಿದ್ದೇವೆ.
ದೇವಸ್ಥಾನಗಳ ಹಣ ಕಿತ್ತುಕೊಳ್ಳುತ್ತಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿದರು, ಆದರೆ ಗ್ರಾಮೀಣ ಭಾಗದ ದೇವಸ್ಥಾನಗಳ ಅಭಿವೃದ್ಧಿಗೆ ನಾವು ಮುಂದಾಗಿದ್ದೇವೆ ಎನ್ನುವ ಸತ್ಯ ಮರೆಮಾಚಿ ಅಪಪ್ರಚಾರ ಮಾಡುತ್ತಿದ್ದಾರೆ.
ನೇಹಾ ಕೊಲೆ ಪ್ರಕರಣದ ಆರೋಪಿ ಬಂಧಿತನಾಗಿ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಆಗಿದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಕೊಲೆಗಳ ಪ್ರಮಾಣ ಕಡಿಮೆ ಆಗಿದೆ, ಅಂಕಿ ಅಂಶಗಳಿಗಿಂತ ಸಮಾಜದ ಸ್ವಾಸ್ಥ್ಯ ಮುಖ್ಯ, ಈ ಹಿನ್ನೆಲೆಯಲ್ಲಿ ಅಪರಾಧ ತಡೆಗಟ್ಟಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುಪ್ರೀಂಕೋರ್ಟ್ ಮೊರೆ
ರಾಜ್ಯ ಭೀಕರ ಬರಕ್ಕೆ ತುತ್ತಾದಾಗಲೂ ರಾಜ್ಯದ ಪಾಲಿನ ಬರ ಪರಿಹಾರವನ್ನು ಕೇಂದ್ರ ಕೊಡಲಿಲ್ಲ, ನಾವು ನಮ್ಮ ಪಾಲು ಕೇಳಲು ಪದೇ ಪದೇ ಕೇಂದ್ರಕ್ಕೆ ಹೋಗಿ ಮನವಿ ಮಾಡಿದರೂ ಕೊಡಲಿಲ್ಲ, ನಾನೇ ಪ್ರಧಾನಿ ಮತ್ತು ಅಮಿತ್ ಷಾ ಅವರಿಗೆ ಮನವಿ ಕೊಟ್ಟರೂ ಪ್ರಯೋಜನ ಆಗಲಿಲ್ಲ, ಆದ್ದರಿಂದ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು.
ಕೇಂದ್ರದ ಅಸಹಕಾರ ನಡುವೆಯೂ ನಾವು ರಾಜ್ಯದ ಜನತೆಯ ಕೈ ಬಿಡಲಿಲ್ಲ, ಪರಿಹಾರ ಕೊಟ್ಟೆವು ಎಂದರು.
ಬಿಜೆಪಿಯ ದೇವರಾಜೇಗೌಡ ಅವರೇ ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದ್ದರು, ಅತ್ಯಾಚಾರಕ್ಕೆ ಒಳಗಾದವರು ದೂರು ಕೊಟ್ಟರು, ಆರು ತಿಂಗಳ ಮೊದಲೇ ಬಿಜೆಪಿಗೆ ವಿಷಯ ಗೊತ್ತಿತ್ತು, ಆದರೂ ಪ್ರಜ್ವಲ್‌ಗೆ ಎನ್‌ಡಿಎ ಟಿಕೆಟ್ ನೀಡಿತು, ಮೋದಿ ಬಂದು ಪ್ರಜ್ವಲ್ ಗೆಲ್ಲಿಸಲು ಭಾಷಣ ಮಾಡಿದರು ಎಂದು ಟೀಕಿಸಿದರು.