ಬೆಂಗಳೂರು:ಜಿಲ್ಲಾ, ತಾಲ್ಲೂಕು ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಸಿ ಜನರಿಗೆ ಅಧಿಕಾರ ಕೊಡುವುದಾಗಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು, ಪಕ್ಷದ ನಾಯಕರು, ಕಾರ್ಯಕರ್ತರು ಸಿದ್ಧರಾಗಿ ಎಂದು ಕರೆ ನೀಡಿದರು.
ತೆರವಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಹಿಂದಿನ ಬಿಜೆಪಿ ಆಡಳಿತ ಚುನಾವಣೆ ನಡೆಸದೆ, ಜನರಿಗೆ ಇದ್ದ ಅಧಿಕಾರವನ್ನು ಕಸಿದುಕೊಂಡಿತ್ತು.
ಕಾನೂನು ತೊಡಕು ನಿವಾರಿಸುತ್ತೇವೆ
ಇರುವ ಕಾನೂನು ತೊಡಕುಗಳನ್ನು ನಿವಾರಿಸಿ ನಾವು ಚುನಾವಣೆ ನಡೆಸುತ್ತೇವೆ, ನೀವು ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಾಗಲು ಈ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಅಧಿಕಾರ ಪಡೆಯುವ ಜೊತೆಗೆ ಪಕ್ಷಕ್ಕೂ ನ್ಯಾಯ ದೊರಕಿಸಿ.
ನಾನು ಇನ್ನೆಷ್ಟು ದಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿರುತ್ತೇನೋ ಗೊತ್ತಿಲ್ಲ, ಅಷ್ಟರೊಳಗೆ ಪಕ್ಷಕ್ಕೆ ದುಡಿದ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುತ್ತೇನೆ.
ಪಂಡಿತ್ ಜವಾಹರ್ ಲಾಲ್ ನೆಹರು, ರಾಜಗೋಪಾಲಾಚಾರಿ, ಕೆಂಗಲ್ ಹನುಮಂತಯ್ಯ, ಬಿ.ಡಿ.ಜತ್ತಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಕೆಳಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಬೆಳೆದವರು.
ಪಕ್ಷದ ಎಲ್ಲಾ ಘಟಕ ಹೊಸದಾಗಿ ರಚನೆ
ಸಂಘಟನೆ ಬಲಗೊಳಿಸಬೇಕು, ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಹೊಸದಾಗಿ ರಚಿಸುವ ಸಮಯ ಬಂದಿದೆ, ಮೊದಲು ಪಕ್ಷದ ಕೆಲಸ ಮಾಡಬೇಕು, ಕೇವಲ ಗುರುತಿನ ಚೀಟಿಗೋಸ್ಕರ ಬರುವವರು ಮನೆಯಲ್ಲಿಯೇ ಇರಿ ಎಂದರು.
ಖಾದಿ ಬಟ್ಟೆ ಹಾಕಿಕೊಂಡು, ಕಾರು ಇಟ್ಟುಕೊಂಡು ಎಂಎಲ್‌ಸಿ ಮಾಡಿ, ಅಧ್ಯಕ್ಷನನ್ನಾಗಿ ಮಾಡಿ ಎಂದರೆ ಅದು ಇಲ್ಲಿ ನಡೆಯುವುದಿಲ್ಲ, ಕೆಲಸ ಮಾಡುವವರಿಗೆ ಆದ್ಯತೆ, ನಿಮ್ಮ ಬೂತ್ ಮಟ್ಟದಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ತಂದು ನಾಯಕತ್ವಕ್ಕೆ ಬೇಡಿಕೆ ಇಡಬೇಕು, ನಿಮ್ಮ ಬೂತ್‌ಗಳಲ್ಲಿ ಪಕ್ಷಕ್ಕೆ ಮುನ್ನಡೆ ತರಲು ಆಗದಿದ್ದರೆ ನಾವು ಬೇರೆಯವರನ್ನು ತಯಾರು ಮಾಡುತ್ತೇವೆ ಎಂದು ಎಚ್ಚರಿಸಿದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಹೋಗುವ ಮುನ್ನ ಪಕ್ಷದ ಸಂಘಟನೆಗೆ ಭದ್ರ ಬುನಾದಿ ಹಾಕಿಕೊಡುವ ಕೆಲಸ ಮಾಡುತ್ತೇನೆ, ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ, ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ, ನೀವೆಲ್ಲರೂ ಸಿದ್ಧರಾಗಬೇಕು ಎಂದರು.
ಜಿಲ್ಲಾ, ತಾಲ್ಲೂಕು ಪಂಚಾಯತ್‌ಗಳಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆಗೆ ಇನ್ನೂ ಕೆಲವು ಪಾಲಿಕೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು-ಮೂರು ವರ್ಷಗಳೇ ಆಗಿವೆ.
ಜನ ನಮಗೆ ಅಧಿಕಾರ ನೀಡಿದ್ದಾರೆ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ನಮಗೆ ಅಧಿಕಾರ ನೀಡಿದ್ದಾರೆ, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲೂ ನಮ್ಮನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇವೆ.
ಲೋಕಸಭಾ ಚುನಾವಣಾ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಸಿದ್ಧವಾಗಲಿದ್ದೇವೆ.
ನೀವು ಈಗಿನಿಂದಲೇ ಚುನಾವಣಾ ಹೋರಾಟಕ್ಕೆ ಸಿದ್ಧರಾಗಿ ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಶಿವಕುಮಾರ್ ಕರೆ ನೀಡಿದರು.