ಬೆಂಗಳೂರು:ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಗರದ ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿದಂತೆ ದೇಶಾದ್ಯಂತ 15 ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಹತ್ವದ ದಾಖಲೆಗಳನ್ನು ವಶ ಪಡಿಸಿಕೊಂಡಿದೆ.
ಉಗ್ರರ ಜೊತೆ ಸಂಪರ್ಕ ಹೊಂದಿದ್ದವರ ಬೆಂಗಳೂರಿನಲ್ಲಿನ ನಾಲ್ಕು ಸ್ಥಳಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಯಮತ್ತೂರು ವೈದ್ಯನ ಮನೆ ಮೇಲೆ ದಾಳಿ
ಪ್ರಕರಣ ಸಂಬಂಧ ಬೆಂಗಳೂರು ಮಾತ್ರವಲ್ಲದೆ, ಕೊಯಮತ್ತೂರಿನ ವೈದ್ಯ ಜಾಫರ್ ಇಕ್ಬಾಲ್ ಮತ್ತು ನಯನ್ ಸಾದಿಕ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ ಮತ್ತು ಮುಸಾವಿರ್ ಹುಸೇನ್ ಶಾಜಿಬ್‌ಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿಯ ಒಟ್ಟು ನಾಲ್ಕು ಸ್ಥಳಗಳ ಮೇಲೆ ಎನ್‌ಐಎ ದಾಳಿ ಮಾಡಿ ದಾಖಲೆಗಳನ್ನು ಪಡೆದುಕೊಂಡಿದೆ.
ಉಗ್ರ ಮತೀನ್ ಬೆಂಗಳೂರಿಗೆ ಬಂದಾಗ ಸಹಾಯ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆತನೊಂದಿಗೆ ಸಂಪರ್ಕಕ್ಕೆ ಬಂದಿದ್ದವರ ಮನೆ ಹಾಗೂ ವಾಸ ಸ್ಥಳದ ಮೇಲೆ ದಾಳಿ ಮಾಡಲಾಗಿದೆ.
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ನಂತರ ಕೋಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರಾದ ಪ್ರಕರಣದ ಮಾಸ್ಟರ್ ಮೈಂಡ್ ಮತೀನ್ ತಾಹ ಹಾಗೂ ಬಾಂಬ್ ಇರಿಸಿದ್ದ ಮುಸಾವಿರ್ ಶಾಜಿಬ್‌ನನ್ನು ಎನ್‌ಐಎ ಬಂಧಿಸಿತ್ತು.