ಸಚಿವರ ಔತಣಕೂಟ ಸಭೆಯಲ್ಲಿ ಪಂಚಾಯತ್ ಮೀಸಲಾತಿ ಬಗ್ಗೆ ಚರ್ಚೆ
ಬೆಂಗಳೂರು: ಭಕ್ತವತ್ಸಲ ಹಾಗೂ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ ನೀಡಿರುವ ವರದಿಯ ಆಧಾರದ ಮೇಲೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಲು ಸರ್ಕಾರ ಮುಂದಾಗಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ತಮ್ಮ ಮನೆಯಲ್ಲಿ ಸಚಿವರುಗಳಿಗೆ ಏರ್ಪಡಿಸಿದ್ದ ಔತಣಕೂಟದ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರುಗಳು ನೀಡಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಚುನಾವಣೆಗೆ ಅನುಮತಿ ಕೋರುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸೇರಿದಂತೆ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿ ಪಕ್ಷವನ್ನು ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಸಭೆ ತೀರ್ಮಾನಿಸಿದೆ.
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ನಂತರದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆ ಚರ್ಚೆ ಮಾಡಿದೆ.
ಪೆನ್‌ಡ್ರೈವ್ ಹಾಗೂ ಪ್ರಜ್ವಲ್ ವಿಷಯದಲ್ಲಿ ಕೇಂದ್ರ, ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಈ ಬಗ್ಗೆ ಎಚ್ಚರದಿಂದ ನಡೆ ಇಡಬೇಕು.
ಪೆನ್‌ಡ್ರೈವ್ ಸರ್ಕಾರಕ್ಕೆ ಇರುಸು-ಮುರುಸು ಉಂಟು ಮಾಡಿದೆ ಎಂಬ ಕೆಲವು ಸಚಿವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ ಉಪಮುಖ್ಯಮಂತ್ರಿ, ಯಾರೋ ಮಾಡಿದ್ದಕ್ಕೂ ನಮಗೂ ಸಂಬಂಧವಿಲ್ಲ.
ಮುಳುಗಿ ಹೋಗಿದ್ದ ಜೆಡಿಎಸ್ ಪೆನ್‌ಡ್ರೈವ್ ಮುಂದಿಟ್ಟುಕೊಂಡು ಮತ್ತೆ ತನ್ನ ಸ್ಥಾನ ಉಳಿಸಿಕೊಳ್ಳಲು ಹೊರಟಿದೆ. ಆದರೆ ನಾವು ಪ್ರಜ್ವಲ್ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲೇಬೇಕು, ಆತನಿಗೆ ಶಿಕ್ಷೆ ಕೊಡಿಸಲೇಬೇಕು.
ಎಚ್.ಡಿ.ಕುಮಾರಸ್ವಾಮಿ ಪೆನ್‌ಡ್ರೈವ್ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದು, ಇದನ್ನು ನಾವು ನಿರ್ಲಕ್ಷ್ಯ ಮಾಡಬಾರದು. ಬಹಳ ಎಚ್ಚರಿಕೆಯಿಂದ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಸಚಿವರು ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆ ಬಗ್ಗೆ ಅವಲೋಕನ ಮಾಡಿರುವ ಸಭೆ ಕನಿಷ್ಠ 15 ರಿಂದ 18 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ.
ಗ್ಯಾರಂಟಿ ನಮಗೆ ಕೈಹಿಡಿದಿರುವ ಜೊತೆಗೆ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗ, ಅದರಲ್ಲೂ ಮಹಿಳೆಯರು ನಮ್ಮ ಪಕ್ಷಕ್ಕೆ ಒಲವು ತೋರಿರುವುದರಿಂದ ನಮಗೆ 18 ಸ್ಥಾನ ಲಭ್ಯವಾಗಲಿದೆ ಎಂಬ ಮಾಹಿತಿ ಇದೆ ಎಂದು ಸಿದ್ದರಾಮಯ್ಯ ಸಭೆಗೆ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಯಾವ ಯಾವ ಕ್ಷೇತ್ರಗಳು ನಮ್ಮ ಪಾಲಿಗೆ ದೊರೆಯಲಿವೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ, ಬಹುತೇಕ ಬೇರೆಲ್ಲಾ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಸಚಿವರು ತಮ್ಮ ತಮ್ಮ ಕ್ಷೇತ್ರಗಳ ವರದಿಯನ್ನು ನೀಡಿದ್ದಾರೆ. ಜತೆಗೆ ಬಿಜೆಪಿ-ಜೆಡಿಎಸ್ ಚುನಾವಣೆಯಲ್ಲಿ ಹೇಗೆ ಸಂಘಟಿತ ಹೋರಾಟ ನಡೆಸಿತು ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿ ಅವರು ಪಡೆದುಕೊಂಡರು.
ಫಲಿತಾಂಶ ಹೊರಬಂದ ನಂತರ ಉಳಿದ ಎಲ್ಲಾ ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಿಸಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗೋಣ ಎಂದಿದ್ದಾರೆ.
ಇನ್ನು ವಿಧಾನಸಭೆಯಿಂದ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 13 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಕುರಿತಂತೆ ಪ್ರಾಥಮಿಕ ಚರ್ಚೆ ನಡೆದಿದೆ.
ಪಕ್ಷಕ್ಕೆ 11 ರಲ್ಲಿ ಏಳು ಸ್ಥಾನಗಳು, ಇದರ ಜೊತೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಂದ ತೆರವಾದ ಮತ್ತೊಂದು ಸ್ಥಾನ ದೊರೆಯಲಿದ್ದು, ಇವಕ್ಕೆ ಪಕ್ಷ ಸಂಘಟನೆಗೆ ದುಡಿದವರು ಹಾಗೂ ಹೊರಗಿದ್ದುಕೊಂಡು ಪಕ್ಷಕ್ಕೆ ದುಡಿದವರಿಗೆ ಅವಕಾಶ ಮಾಡಿಕೊಡೋಣ ಎಂದಿದ್ದಾರೆ.
ಚರ್ಚೆ ಸಂದರ್ಭದಲ್ಲಿ ಇಂತಹವರಿಗೆ ಅವಕಾಶ ಕೊಡಲೇಬೇಕೆಂಬ ಒಮ್ಮತದ ಧ್ವನಿಯೂ ಕೇಳಿಬಂದಿದೆ.
ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಶಿವಕುಮಾರ್, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲ, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಭೆ ಕರೆದಿದ್ದಾರೆ.
ಪಕ್ಷದ ಮುಖಂಡರುಗಳು ಅಂದಿನ ಸಭೆಯಲ್ಲಿ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ವರಿಷ್ಠರ ಅನುಮೋದನೆಗೆ ಕಳುಹಿಸಲಾಗುವುದು ಎಂಬ ಮಾಹಿತಿ ನೀಡಿದ್ದಾರೆ.