ತಾತ ದೇವೇಗೌಡರ ಕೊನೆಯ ಕಟ್ಟೆಚ್ಚರಿಕೆ
ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಸಿಲುಕಿರುವ ಸಂಸದ ಪ್ರಜ್ವಲ್ ರೇವಣ್ಣ ತಕ್ಷಣವೇ ಎಸ್‌ಐಟಿ ಮುಂದೆ ಶರಣಾಗದಿದ್ದರೆ ಆತನನ್ನು ಕುಟುಂಬದಿಂದ ಹೊರಗಿಡಬೇಕಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಅವರ ತಾತ ಎಚ್.ಡಿ.ದೇವೇಗೌಡ ಇಂದಿಲ್ಲಿ ಕಟ್ಟೆಚ್ಚರಿಕೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದು ನಾನು ನಿನಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆ ಎಂದು ತಿಳಿಯಬೇಕು, ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ, ಅವನು ನನ್ನ ಮತ್ತು ನನ್ನ ಕುಟುಂಬದವರೆಲ್ಲರ ಕೋಪವನ್ನು ಎದುರಿಸಬೇಕಾಗುತ್ತದೆ.
ಮನೆಯವರ ಕಣ್ಣಲ್ಲಿ ಏಕಾಂಗಿ
ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ, ಈ ಎಚ್ಚರಿಕೆಗೆ ಪ್ರಜ್ವಲ್ ತಲೆಬಾಗದಿದ್ದಲ್ಲಿ, ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ.
ನನ್ನ ಬಗ್ಗೆ ಏನಾದರೂ ಗೌರವ ಇದ್ದಲ್ಲಿ ಕೂಡಲೇ ಹಿಂದಿರುಗಬೇಕೆಂದು ಸಲಹೆ ಮಾಡಿದ್ದಾರೆ.
ಪ್ರಜ್ವಲ್ ವಿಷಯದಲ್ಲಿ ನಾನಾಗಲೀ, ನನ್ನ ಕುಟುಂಬದವರಾಗಲೀ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಭರವಸೆ ಕೊಡುತ್ತೇನೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಎಲ್ಲರಿಗೂ ನ್ಯಾಯ
ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೇ ನನಗೆ ಮುಖ್ಯ.
ಜನರ ವಿಶ್ವಾಸ ಮರಳಿ ಪಡೆಯುವುದಷ್ಟೇ ನನ್ನ ಗುರಿ, ಕಳೆದ ಆರು ದಶಕಗಳ ಕಾಲದ ನನ್ನ ರಾಜಕೀಯ ಜೀವನದುದ್ದಕ್ಕೂ ಜನತೆ ನನ್ನ ಜೊತೆ ನಿಂತಿದ್ದಾರೆ, ಅವರಿಗೆ ನಾನು ಸದಾ ಋಣಿ, ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜ್ವಲ್ ಸ್ನೇಹಿತರು, ಕಾರ್ಯಕರ್ತರು ಮತ್ತು ಕುಟುಂಬದವರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಸ್ವಲ್ಪ ಸಮಯಾವಕಾಶ ಹಿಡಿಯಿತು.
ತ್ಪಪಿತಸ್ಥನೆಂದಾದರೆ ಕಠಿಣ ಶಿಕ್ಷೆ
ನಾನೀಗಾಗಲೇ ತಿಳಿಸಿರುವಂತೆ, ಆತ ತ್ಪಪಿತಸ್ಥನೆಂದಾದರೆ, ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ, ಇವೆಲ್ಲವೂ ನನಗೆ ತಿಳಿದಿದೆ, ನಾನು ಅವರು ಮಾತನಾಡುವುದನ್ನು ತಪ್ಪಿಸಲು ಹೋಗುವುದಿಲ್ಲ.
ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂಬ ವಾದಕ್ಕೂ ನಾನು ಇಳಿಯುವುದಿಲ್ಲ.
ಪ್ರಜ್ವಲ್‌ನ ಚಟುವಟಿಕೆಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ ಎಂದು ಸ್ಪಷ್ಪಡಿಸಿರುವ ದೇವೇಗೌಡರು, ಘಟನೆ ನಂತರ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ಪ್ರೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡುವುದಿಲ್ಲ.
ದೇವರಿಗೆ ಉತ್ತರಿಸಬೇಕಾಗುತ್ತದೆ
ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ ಮತ್ತು ನಾವು ಎಸಗಿದ ಕೃತ್ಯಗಳಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ನಂಬಿದ್ದೇನೆ.
ನನ್ನ ಸತ್ಯ ಮತ್ತು ನೋವಿನ ಹೊರೆಯನ್ನು ಭಗವಂತನ ಪದತಳದಲ್ಲಿ ಇರಿಸಿದ್ದೇನೆ ಎಂದಿದ್ದಾರೆ.