ಬೆಂಗಳೂರು:ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ನವೀನ್ ಗೌಡ ಮತ್ತು ಚೇತನ್ ಅವರನ್ನು ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇದ್ದ ಕಾರಣ ನವೀನ್ ಮತ್ತು ಚೇತನ್ ತಮ್ಮ ಸ್ನೇಹಿತ ಶ್ಯಾಮ್ ಸುಂದರ್ ಜೊತೆ ನ್ಯಾಯಾಲಯಕ್ಕೆ ಬಂದ ಸಂದರ್ಭದಲ್ಲಿ ಇವರನ್ನು ವಶಕ್ಕೆ ಪಡೆಯಲಾಯಿತು.
ನ್ಯಾಯಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ವಶಕ್ಕೆ
ನ್ಯಾಯಾಲಯದಿಂದ ಹೊರಬಂದು ವಾಹನ ಪಾರ್ಕಿಂಗ್ ಪ್ರದೇಶದಲ್ಲಿದ್ದಾಗ ಆರೋಪಿಗಳ ಜೊತೆಗೆ ಸ್ನೇಹಿತನನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಜ್ವಲ್‌ನ ಎಡಿಟೆಡ್ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟು ತಲೆ ಮರೆಸಿಕೊಂಡಿದ್ದರು ಎಂಬ ಆರೋಪ ಇವರ ಮೇಲಿದೆ.
ನವೀನ್ ಮತ್ತು ಇತರರ ವಿರುದ್ಧ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಏಪ್ರಿಲ್ 23ರಂದು ಹಾಸನ ಕೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಸಿಡಿ, ಪೆನ್‌ಡೈವ್ ಹಂಚಿದ್ದರು
ಏಪ್ರಿಲ್ 21ರ ಸಂಜೆಯಿಂದ ಈ ಆರೋಪಿಗಳು ಸಿಡಿ ಮತ್ತು ಪೆನ್‌ಡೈವ್, ಗೋಡೆ ಬರಹ ಹಾಗೂ ಪೋಸ್ಟರ್‌ಗಳನ್ನು ಹಂಚಿದ್ದರು.
ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಅಶ್ಲೀಲ ಭಾವಚಿತ್ರ ಮತ್ತು ವಿಡಿಯೋಗಳನ್ನು ತಯಾರಿಸಿಕೊಂಡು ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಮೊಬೈಲ್‌ಗಳಲ್ಲಿ ತೋರಿಸಿ ಮತ್ತು ಹಂಚಿಕೆ ಮಾಡಿ ಜನರ ದಿಕ್ಕು ತಪ್ಪಿಸಿ ಅಭ್ಯರ್ಥಿ ಪರವಾಗಿ ಮತದಾನ ಮಾಡದಂತೆ ಪ್ರಚೋದಿಸುತ್ತಿದ್ದಾರೆ.
ಹಾಗೂ ಚುನಾವಣೆಯಲ್ಲಿ ನ್ಯಾಯಯುತ ಮತದಾನ ಆಗುವುದನ್ನು ತಪ್ಪಿಸುವ ಸಲುವಾಗಿ ದುಷೃತ್ಯವನ್ನು ಎಸಗುತ್ತಿರುವ ಮೇಲ್ಕಂಡವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದರು.
ತನಿಖೆ ಎಸ್‌ಐಟಿಗೆ ವರ್ಗಾವಣೆ
ಇದಾದ ನಂತರ ಅಶ್ಲೀಲ ಸಿಡಿ ಮತ್ತು ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪ ಪ್ರಕರಣದ ತನಿಖೆಯನ್ನು ಪೊಲೀಸರಿಂದ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿತ್ತು.
ತದನಂತರ ಇವರು ನಿರೀಕ್ಷಣಾ ಜಾಮೀನು ಕೋರಿ ವಿಚಾರಣಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರಕರಣ ದಾಖಲಾದ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು, ಇವರು ಶಕ್ತಿಸೌಧದಲ್ಲೇ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.
6 ಮತ್ತು 7ನೇ ಆರೋಪಿ ಈಗಾಗಲೇ ವಶಕ್ಕೆ
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮತ್ತು 7ನೇ ಆರೋಪಿಗಳನ್ನೂ ಎಸ್‌ಐಟಿ ಈಗಾಗಲೇ ವಶಕ್ಕೆ ಪಡೆದಿದೆ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಇದೇ 31ಕ್ಕೆ ಎಸ್‌ಐಟಿ ಮುಂದೆ ಹಾಜರಾಗುವುದಾಗಿ ನೀಡಿದ ಹೇಳಿಕೆ ಬೆನ್ನಲ್ಲೇ ಈ ಆರೋಪಿಗಳ ಬಂಧನ ಕುತೂಹಲ ಮೂಡಿಸಿದೆ.