ಪದವೀಧರ, ಶಿಕ್ಷಕರ ಕ್ಷೇತ್ರ: ಬಿಜೆಪಿ-ಜೆಡಿಎಸ್ ಬೆಂಬಲಕ್ಕೆ ಮನವಿ
ಬೆಂಗಳೂರು:ಶಿಕ್ಷಣ ಕ್ಷೇತ್ರವನ್ನು ಸದಾ ಹಾಳು ಮಾಡುವ ಕೆಲಸದಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಇಂದಿಲ್ಲಿ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಇಟಿ ಪರೀಕ್ಷೆ, ಶಾಲಾ ಮಕ್ಕಳಿಗೆ ಪಬ್ಲಿಕ್ ಎಕ್ಸಾಮ್ ವಿಚಾರದಲ್ಲಿ ಗೊಂದಲ ಉಂಟು ಮಾಡಿದ ರಾಜ್ಯ ಸರ್ಕಾರ ಶಿಕ್ಷಣ ವಾತಾವರಣ ಹದಗೆಡಿಸಿದೆ, ಶಿಕ್ಷಕರ ಕುರಿತು ಕಾಳಜಿ, ಗೌರವ ನೀಡದ ಕಾಂಗ್ರೆಸ್ ಶಿಕ್ಷಕರ, ಪದವೀಧರರ ವಿರುದ್ಧವಾದ ನೀತಿಗಳನ್ನು ಹೊಂದಿದೆ ಎಂದರು.
ರಾಜಕೀಯ ಪ್ರೇರಿತ ನಿರ್ಧಾರ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ವಿರೋಧಿಸುತ್ತಿದೆ, ವೈಜ್ಞಾನಿಕವಾಗಿ ಯೋಚಿಸದೆ, ಚರ್ಚೆ-ವಿಮರ್ಶೆ ಇಲ್ಲದೆ ಏಕಾಏಕಿಯಾಗಿ ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದುಹಾಕುವ ಹಾಗೂ ರಾಜ್ಯ ಶಿಕ್ಷಣ ನೀತಿ ತರುವ ನಿಲುವು ಕೈಗೊಂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
7ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡದ ಕಾಂಗ್ರೆಸ್ ಸರಕಾರ, ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ, ಒಪಿಎಸ್ ಬಗ್ಗೆ ಸುಳ್ಳು ಭರವಸೆ ನೀಡಿದ್ದು, ಯುಪಿಎ ಸರಕಾರವೇ ಎನ್‌ಪಿಎಸ್ ಜಾರಿಗೊಳಿಸಿತ್ತು.
ಬಿಜೆಪಿ ಆಡಳಿತದಲ್ಲಿ ಪಾಲಿಟೆಕ್ನಿಕ್, ಐಟಿಐ ಗುಣಮಟ್ಟ ಹೆಚ್ಚಿಸಿ ಪ್ರವೇಶ ಪ್ರಮಾಣ ಶೇ.100ಕ್ಕೆ ಹೆಚ್ಚಳವಾಗಿದೆ, ಕಲಿತ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ, ಸರಕಾರಿ ಕಾಲೇಜುಗಳಲ್ಲಿ ಶೇ. ೮೭ರಷ್ಟು ಅಕ್ರೆಡಿಷನ್ ಕೊಡಿಸಿದ್ದೇವೆ, ಶಿಕ್ಷಕರ ನೇಮಕಾತಿ ವೇಳೆ ಪಾರದರ್ಶಕ ಕೌನ್ಸೆಲಿಂಗ್ ನಡೆಸಿದ್ದೇವೆ ಎಂದರು.
25ಕ್ಕೂ ಹೆಚ್ಚು ವಿವಿಗಳ ಸ್ಥಾಪನೆ
ಬಡ್ತಿ ಕಾಣದ ಶಿಕ್ಷಕರಿಗೆ ಬಡ್ತಿ ಕೊಡಿಸಿದ್ದೇವೆ, ನೇಮಕಾತಿ, ಪಾರದರ್ಶಕತೆ, ಕೆರಿಯರ್ ಪ್ರಮೋಷನ್ ನೀಡಿದ್ದೇವೆ, ನಮ್ಮ ಅವಧಿಯಲ್ಲಿ 25ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದೇವೆ.
ಯಡಿಯೂರಪ್ಪ ಅವರ ಅವಧಿಯಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ಹುದ್ದೆಗಳ ಭರ್ತಿಗೆ ಅವಕಾಶ ಮಾಡಿದೆ, ಕಾಂಗ್ರೆಸ್ ನೇಮಕಾತಿಯನ್ನು ಸಂಪೂರ್ಣ ನಿಷೇಧಿಸಿತ್ತು.
ಜ್ಞಾನ ಆಯೋಗ ಆರಂಭ, ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಮೂಲಕ ದೊಡ್ಡ ಸುಧಾರಣೆ ಮಾಡಲಾಗಿದೆ.
ಕೌಶಲ್ಯಯುಕ್ತ ಶಿಕ್ಷಣ
ಕೌಶಲ್ಯಯುಕ್ತ ಶಿಕ್ಷಣ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಕ್ರಮ ತೆಗೆದುಕೊಂಡಿದ್ದಾರೆ.
ಈ ಬಾರಿಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಬಲಿಸಬೇಕು ಎಂದು ಮನವಿ ಮಾಡಿದರು.