ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ರಾಷ್ಟ್ರಕ್ಕೆ ಹಿಂತಿರುಗಲಿದ್ದಾರೆ.
ಜರ್ಮನಿಯ ಮ್ಯೂನಿಚ್‌ನಿಂದ ಭಾರತೀಯ ಕಾಲಮಾನ 4 ಗಂಟೆ 30 ನಿಮಿಷಕ್ಕೆ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್ ಹೊರಟು ನೇರವಾಗಿ ಮುಂಜಾನೆ 00.30ಕ್ಕೆ ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ನ್ಯಾಯಾಧೀಶರ ಮುಂದೆ ಹಾಜರಿ
ನಗರಕ್ಕೆ ಧಾವಿಸುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು, ವೈದ್ಯಕೀಯ ತಪಾಸಣೆ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.
ರಾಜ್ಯದಲ್ಲಿ ನಡೆದ ಮೊದಲ ಹಂತದ ಹಾಸನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯೂ ಆಗಿರುವ ಪ್ರಜ್ವಲ್ ಮತದಾನ ಮುಗಿಸಿಕೊಂಡು ಅಂದು ರಾತ್ರಿಯೇ ವಿದೇಶಕ್ಕೆ ತೆರಳಿದ್ದರು.
ಅವರು ವಿದೇಶಕ್ಕೆ ತೆರಳಿದ ಎರಡು ದಿನಗಳ ನಂತರ ಲೈಂಗಿಕ ದೌರ್ಜನ್ಯ, ಅಪಹರಣ, ಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಎಸ್‌ಐಟಿ ರಚನೆ ಮಾಡಲಾಯಿತು.
ರಾಷ್ಟ್ರಾದ್ಯಂತ ತಲ್ಲಣ
ಇದೇ ವೇಳೆಗೆ ಅವರ ಲೈಂಗಿಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೆನ್‌ಡ್ರೈವ್ ಹಾಗೂ ಸಿಡಿಗಳು ಇಡೀ ಹಾಸನ ಜಿಲ್ಲೆಯಾದ್ಯಂತ ಹರಿದಾಡಿ ರಾಜ್ಯವಷ್ಟೇ ಅಲ್ಲದೆ ರಾಷ್ಟ್ರಾದ್ಯಂತ ತಲ್ಲಣ ಉಂಟು ಮಾಡಿತ್ತು.
ಎಸ್‌ಐಟಿ ನೋಟಿಸ್ ಜಾರಿಗೊಳಿಸಿದ ನಂತರ ತಮ್ಮ ವಕೀಲರ ಮೂಲಕ ಉತ್ತರ ನೀಡಿದ್ದರಾದರೂ, ಅದರ ಮುಂದೆ ಅವರು ಹಾಜರಾಗಲಿಲ್ಲ.
ತಾತ, ದೇವೇಗೌಡರು, ಮಾಡಿದ ಮನವಿ ಹಾಗೂ ವಕೀಲರ ಸಲಹೆಯಂತೆ ಪ್ರಜ್ವಲ್ ರಾಷ್ಟ್ರಕ್ಕೆ ಹಿಂತಿರುಗುವ ಹಾಗೂ ಎಸ್‌ಐಟಿ ಮುಂದೆ ಹಾಜರಾಗುವ ತೀರ್ಮಾನವನ್ನು ವಿಡಿಯೊ ಸಂದೇಶದ ಮೂಲಕ ತಿಳಿಸಿದರು.
ನಿರೀಕ್ಷಣಾ ಜಾಮೀನಿಗೆ ಅರ್ಜಿ
ರಾಷ್ಟ್ರಕ್ಕೆ ಹಿಂತಿರುಗುತ್ತಿದ್ದಂತೆ ತಮ್ಮನ್ನು ಬಂಧಿಸಬಹುದೆಂಬ ಆಲೋಚನೆಯಿಂದ ಪ್ರಜ್ವಲ್, ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಮ್ಮ ವಿರುದ್ಧದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಪ್ರಜ್ವಲ್ ಪರ ವಕೀಲರು ಬುಧವಾರವೇ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳುವಂತೆ ಮನವಿ ಮಾಡಿದರೂ ನ್ಯಾಯಾಲಯ ಮೇ 31ಕ್ಕೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪ್ರಜ್ವಲ್ 36 ದಿನಗಳ ನಂತರ ನಗರಕ್ಕೆ ಹಿಂತಿರುಗುತ್ತಿದ್ದಾರೆ.
ಪ್ರಜ್ವಲ್ ಬಂಧನಕ್ಕಾಗಿ ಎಸ್‌ಐಟಿ ಎಲ್ಲಾ ರೀತಿಯ ಕಾನೂನನ್ನು ಬಳಕೆ ಮಾಡಿದ್ದರೂ ಅವರನ್ನು ಗುರುತಿಸಿ ಕರೆತರಲು ಸಾಧ್ಯವಾಗಿರಲಿಲ್ಲ.
ಸ್ವತಃ ಮುಖ್ಯಮಂತ್ರಿ ಅವರೇ ಪ್ರಧಾನಿ ಅವರಿಗೆ ಎರಡು ಬಾರಿ ಪತ್ರ ಬರೆದು ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಪಡಿಸುವಂತೆ ಮನವಿ ಮಾಡಿದ್ದರು.
ವಿದೇಶಾಂಗ ಇಲಾಖೆಗೆ ಪತ್ರ
ಇದಕ್ಕೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಲಿಲ್ಲ, ಕಾನೂನು ರೀತ್ಯಾ ತನಿಖಾಧಿಕಾರಿಗಳು ವಿದೇಶಾಂಗ ಇಲಾಖೆಗೆ ಪತ್ರ ಬರೆದ ನಂತರವೇ ಪ್ರಜ್ವಲ್ ಪಾಸ್‌ಪೋರ್ಟ್ ರದ್ದು ಮಾಡುವ ಪ್ರಕ್ರಿಯೆ ಆರಂಭಗೊಂಡಿತು.
ಪ್ರಜ್ವಲ್ ಅವರ ಪ್ರಸಕ್ತ ಲೋಕಸಭಾ ಅವಧಿ ಪೂರ್ಣಗೊಳ್ಳುವ ಸಮಯ ಬಂದಿದ್ದರಿಂದ ಅವರಿಗೆ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಕೂಡ ರದ್ದಾಗುತ್ತಿತ್ತು.
ಇದೆಲ್ಲವನ್ನು ಅರಿತ ಪ್ರಜ್ವಲ್ ಕಡೆಗೂ ದೇಶಕ್ಕೆ ಹಿಂತಿರುಗಿ ಎಸ್‌ಐಟಿಗೆ ಶರಣಾಗಿ ಕಾನೂನು ಹೋರಾಟ ಮಾಡುವ ತೀರ್ಮಾನ ಕೈಗೊಂಡರು.
ಹಿರಿಯ ಅಧಿಕಾರಿಗಳ ಸಮಾಲೋಚನೆ
ಪ್ರಜ್ವಲ್ ನಗರಕ್ಕೆ ಹಿಂತಿರುಗುವುದು ಖಚಿತವಾಗುತ್ತಿದ್ದಂತೆ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಸಮಾಲೋಚನಾ ಸಭೆ ಮುಗಿಯುತ್ತಿದ್ದಂತೆ ಹಿರಿಯ ಅಧಿಕಾರಿಗಳ ತಂಡ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟು, ವಿಮಾನ ನಿಲ್ದಾಣದ ಅಧಿಕಾರಿಗಳು, ಭದ್ರತಾ ಹಾಗೂ ವಲಸೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.
ಪ್ರಜ್ವಲ್ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡು ಅವರನ್ನು ತಮ್ಮ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಈಗಾಗಲೇ ರಾಷ್ಟ್ರದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಸಂದೇಶ ರವಾನೆ ಮಾಡಿತ್ತು.
ಸಂದೇಶದ ರವಾನೆ ಹಿನ್ನೆಲೆಯಲ್ಲಿ ಪ್ರಜ್ವಲ್ ರಾಷ್ಟ್ರದ ಯಾವುದೇ ವಿಮಾನ ನಿಲ್ದಾಣಕ್ಕೆ ಬಂದರೂ ಅವರನ್ನು ವಲಸೆ ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಆದರೆ, ಪ್ರಜ್ವಲ್ ಮ್ಯೂನಿಚ್‌ನಿಂದ ನೇರವಾಗಿ ನಗರಕ್ಕೆ ಧಾವಿಸುತ್ತಿರುವುದರಿಂದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ತನ್ನ ವಶಕ್ಕೆ ಪಡೆಯಲಿದೆ.