ಬೆಂಗಳೂರು:ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಅಪಹರಣ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರ ಹೆಚ್ಚಿನ ವಿಚಾರಣೆಗಾಗಿ ಜೂನ್ ೬ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ವಿದೇಶದಿಂದ ಪ್ರಜ್ವಲ್ ಅವರನ್ನು ಇಂದು ಮುಂಜಾನೆ ವಶಕ್ಕೆ ಪಡೆದ ಎಸ್‌ಐಟಿ ಪೊಲೀಸರು, ಮಧ್ಯಾನ್ಹ ನಗರದ 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ವಾದ-ಪ್ರತಿವಾದ ಆಲಿಸಿ ಒಂದು ಗಂಟೆಗಳ ಕಾಲ ತೀರ್ಪು ಕಾಯ್ದಿರಿಸಿದ, ನಂತರ ನ್ಯಾಯಾಧೀಶ ಕೆ.ಎನ್.ಶಿವಕುಮಾರ್, ಒಂದು ವಾರಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿದರು.
ವಕೀಲರ ಭೇಟಿಗೆ ಅವಕಾಶ
ಅಷ್ಟೇ ಅಲ್ಲ ಪ್ರತಿನಿತ್ಯ ಬೆಳಗ್ಗೆ 9-30 ರಿಂದ 10-30 ರವರೆಗೆ ತಮ್ಮ ವಕೀಲರ ಭೇಟಿಗಾಗಿ ಪ್ರಜ್ವಲ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಮನೆ ಊಟ ಹಾಗೂ ತಮ್ಮನ್ನು ಇರಿಸುವ ಕೊಠಡಿ ಸ್ವಚ್ಛತೆ, ಅಲ್ಲದೆ, ಮಾಧ್ಯಮಗಳು ತೀರ್ಪುಗಳನ್ನು ನೀಡದಂತೆ ನಿರ್ಬಂಧಿಸಬೇಕು ಎಂಬ ಪ್ರಜ್ವಲ್ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ.
ಇದಕ್ಕೂ ಮೊದಲು ಸರ್ಕಾರಿ ವಕೀಲರು ಮತ್ತು ಪ್ರಜ್ವಲ್ ವಕೀಲರು ತಮ್ಮ ತಮ್ಮ ವಾದಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು.
ಹೊರಗಿಟ್ಟರೆ ಸಾಕ್ಷ್ಯಗಳ ನಾಶ ಸಾಧ್ಯತೆ
ಪ್ರಜ್ವಲ್ ಅವರನ್ನು 15 ದಿನಗಳ ಕಸ್ಟಡಿಗೆ ಕೊಡಬೇಕು, ಇವರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪಹರಣ ಆರೋಪ ಪ್ರಕರಣಗಳಿವೆ, ಇವರು ಕಾನೂನು ಮಾಡುವವರು, ಇಂತಹವರನ್ನು ಹೊರಗಿಟ್ಟರೆ ತಮ್ಮ ಪ್ರಭಾವ ಬಳಸಿ ಸಾಕ್ಷ್ಯಗಳನ್ನು ನಾಶ ಪಡಿಸಬಹುದು ಎಂದು ವಾದಿಸಿದರು.
ಇವನೊಬ್ಬ ವಿಕೃತ ಕಾಮಿ ಎನಿಸುತ್ತದೆ, ಈತ ತುಂಬಾ ಡೇಂಜರ್ ಇದ್ದಾನೆ, ಸಂತ್ರಸ್ತ ಮಹಿಳೆ ಹೇಳಿಕೆ ಗಮನಿಸಿದರೆ ಅತ್ಯಾಚಾರ ಎಸಗಿದ್ದಾನೆ, ಹೆಚ್ಚು ಸಂತ್ರಸ್ತೆಯರಿದ್ದಾರೆ, ಮಾಧ್ಯಮಗಳಲ್ಲಿ ಸುದ್ದಿಯಾಗಬಾರದು ಎಂದು ತಡೆಯಾಜ್ಞೆ ತಂದಿದ್ದಾನೆ.
ವಿಡಿಯೊ ಮಾಡಿರುವ ಮೊಬೈಲ್ ಪತ್ತೆ ಮಾಡಬೇಕಿದೆ, ಹಲವು ಸಾಕ್ಷ್ಯಗಳ ಪತ್ತೆ ಆಗಬೇಕಿದೆ, ಈತ ದೇಶ ಬಿಟ್ಟು ಹೋಗಿದ್ದ, ವಾಪಸ್ ಬರುವ ಉದ್ದೇಶ ಇರಲಿಲ್ಲ, ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲು 15 ದಿನಗಳ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದರು.
ಈತ ಸಾಮಾನ್ಯನಲ್ಲ, ತನಿಖೆ ಪೂರ್ಣಗೊಳ್ಳುವವರೆಗೂ ಜಾಮೀನು ನೀಡಬಾರರು ಎಂದು ಬಲವಾದ ವಾದ ಮಾಡಿದರು.
ರೆಡಿಮೇಡ್ ದೂರು
ಇದಕ್ಕೆ ಪ್ರತಿಯಾಗಿ ಪ್ರಜ್ವಲ್ ವಕೀಲರು, ಎಸ್‌ಐಟಿ ಅವರು ರೆಡಿಮೇಡ್ ದೂರು ದಾಖಲಿಸಿದ್ದಾರೆ, ಅವರನ್ನು ಬಂಧನದಲ್ಲಿ ವಿಚಾರಣೆಗೆ ಒಳಪಡಿಸುವ ಅಗತ್ಯವಿಲ್ಲ.
ಎಸ್‌ಐಟಿ ಸಲ್ಲಿಸಿರುವುದು ಸಿದ್ಧಪಡಿಸಿದ ದೂರಿನಂತಿದೆ, ಪ್ರಜ್ವಲ್ ವಿರುದ್ಧ ದೂರು ನೀಡಿದ ಮಹಿಳೆಯ ವಿಡಿಯೊ ಮಾಡಿಲ್ಲ ಎಂದು ದೂರುದಾರರ ವಿಡಿಯೊಕ್ಕೆ ಸಂಬಂಧಿಸಿದ ಬೇರೆ ಪ್ರಕರಣಗಳನ್ನು ಉಲ್ಲೇಖಿಸಿದರು.
ದೂರುದಾರರು ಬಲವಾದ ಸಾಕ್ಷ್ಯಗಳನ್ನು ಒದಗಿಸಿಲ್ಲ, ಎಸ್‌ಐಟಿಗೆ 15 ದಿನಗಳ ಕಾಲ ವಶಕ್ಕೆ ನೀಡುವ ಅಗತ್ಯವೇ ಇಲ್ಲ ಎಂದು ಪ್ರಜ್ವಲ್ ವಕೀಲ ಅರುಣ್ ಬಲವಾಗಿ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಜೂನ್ ೬ರವರೆಗೆ ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶಿಸಿದರು.
ರಾತ್ರಿ ಎಸ್‌ಐಟಿ ಸೆಲ್‌ನಲ್ಲಿ
ಇದಕ್ಕೂ ಮುನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಪ್ರಜ್ವಲ್ ರೇವಣ್ಣ ಅವರನ್ನು ರಾತ್ರಿ ಸಿಐಡಿ ಕಚೇರಿ ಆವರಣಲ್ಲಿರುವ ಎಸ್‌ಐಟಿ ಸೆಲ್‌ನಲ್ಲಿ ಇರಿಸಲಾಗಿತ್ತು.
ವಶಕ್ಕೆ ಪಡೆದ ನಂತರ ಅಧಿಕಾರಿಗಳು ಅವರನ್ನು ಯಾವುದೇ ವಿಚಾರಣೆಗೆ ಒಳಪಡಿಸಲಿಲ್ಲ, ಅವರು ವಿದೇಶದಿಂದ ಬಂದ ಉಡುಪಿನಲ್ಲೇ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ವೈದ್ಯಕೀಯ ವರದಿ ಕೈತಲುಪಿದ ತಕ್ಷಣ ಪೊಲೀಸರು ಅವರನ್ನು ಬಿಗಿ ಬಂದೋಬಸ್ತ್‌ನಲ್ಲಿ ನಗರದ 42ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಪೊಲೀಸ್ ಸರ್ಪಗಾವಲು
ಪ್ರಜ್ವಲ್ ಪ್ರಬಲ ರಾಜಕೀಯ ಕುಟುಂಬದಿಂದ ಬಂದವರು ಮತ್ತು ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರು, ಹೀಗಾಗಿ ಸಿಐಡಿ ಕಚೇರಿ ಆವರಣ ಮತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ನ್ಯಾಯಾಲಯದ ಹೊರ ಆವರಣದಲ್ಲಿ ಭಾರೀ ಜನಜಂಗುಳಿಯಿತ್ತು, ಪ್ರಜ್ವಲ್‌ನ ಕರೆತರುವುದರಿಂದ ನ್ಯಾಯಾಲಯ ಪ್ರವೇಶಿಸುವ ರಸ್ತೆಯನ್ನು ಬ್ಲಾಕ್ ಮಾಡಲಾಗಿತ್ತು.
ವಿಚಾರಣೆ ಸಂದರ್ಭದಲ್ಲೂ ನ್ಯಾಯಾಲಯ ಕಿಕ್ಕಿರಿದು ತುಂಬಿತ್ತು, ಅಷ್ಟೇ ಅಲ್ಲದೆ, ನ್ಯಾಯಾಲಯದ ಹೊರಗೂ ಜನರು ಕಿಕ್ಕಿರಿದು ಸೇರಿದ್ದರು.
ಮಹಿಳಾ ಪೊಲೀಸ್ ಅಧಿಕಾರಿಗಳು
ವಿಶೇಷವೆಂದರೆ ಪ್ರಜ್ವಲ್ ಅವರನ್ನು ಮಹಿಳಾ ಪೊಲೀಸ್ ಅಧಿಕಾರಿಗಳೇ ಬಂಧಿಸಿದ್ದಲ್ಲದೆ, ವೈದ್ಯಕೀಯ ಪರೀಕ್ಷೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸುವ ಕೆಲಸವನ್ನೂ ಮಾಡಿದರು.
ಶುಕ್ರವಾರ ಮುಂಜಾನೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್ ಅವರನ್ನು ಭದ್ರತಾ ಸಿಬ್ಬಂದಿ ಹಾಗೂ ವಲಸೆ ಅಧಿಕಾರಿಗಳು ಅವರನ್ನು ನಿರ್ಗಮನದ ದ್ವಾರದಲ್ಲಿದ್ದ ಎಸ್‌ಐಟಿಯ ಐಪಿಎಸ್ ಅಧಿಕಾರಿ ಸುಮನ್ ಪನ್ನೇಕರ್ ನೇತೃತ್ವದ ತಂಡಕ್ಕೆ ಒಪ್ಪಿಸಿದರು.
ಭದ್ರತಾ ಸಿಬ್ಬಂದಿಯಿಂದ ವಶಕ್ಕೆ ಪಡೆಯುವ ಮುನ್ನ ಅಧಿಕಾರಿ ಪನ್ನೇಕರ್, ಆರೋಪಿ ಪ್ರಜ್ವಲ್ ಅವರಿಗೆ ವಾರೆಂಟ್ ತೋರಿಸಿ ವಶಕ್ಕೆ ತೆಗೆದುಕೊಂಡರು, ನಂತರ ಅವರನ್ನು ಪೊಲೀಸ್ ಜೀಪಿನಲ್ಲಿ ಕೂರಿಸಲಾಯಿತು.
ಈ ಸಂದರ್ಭದಲ್ಲಿ ಅಕ್ಕ-ಪಕ್ಕ ಹಾಗೂ ಹಿಂದೆ-ಮುಂದೆ ಮಹಿಳಾ ಪೊಲೀಸ್ ಅಧಿಕಾರಿಗಳೇ ಇದ್ದರು.