ಬೆಂಗಳೂರು:ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಬುಡಕಟ್ಟು ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ವಹಿಸಿದೆ.
ಬ್ಯಾಂಕ್ ನಿರ್ಧಾರ ಕರ್ನಾಟಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಇಲಾಖೆ ಹೊಣೆ ಹೊತ್ತಿರುವ ಸಚಿವ ನಾಗೇಂದ್ರ ತಲೆದಂಡವಾಗುವ ಸಾಧ್ಯತೆ ಇದೆ.
ಸಚಿವರ ಜೊತೆ ಸಿದ್ದರಾಮಯ್ಯ ಸಭೆ
ಪ್ರಕರಣ ಸಿಬಿಐಗೆ ವಹಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ, ಹಿರಿಯ ಸಚಿವ ಎಂ.ಬಿ.ಪಾಟೀಲ್ ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಸಚಿವರಾದ ಡಾ.ಜಿ.ಪರಮೇಶ್ವರ್ ಡಾ.ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಪ್ರಿಯಾಂಕ್ ಖರ್ಗೆ ಜೊತೆ ಸಮಾಲೋಚನೆ ನಡೆಸಿದರು.
ಬ್ಯಾಂಕ್‌ನವರು ಪ್ರಕರಣವನ್ನು ಸಿಬಿಐಗೆ ನೀಡಿರುವುದರಿಂದ ರಾಜ್ಯ ಸರ್ಕಾರದ ಪಾತ್ರದ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲು ಸಭೆ ನಿರ್ಧರಿಸಿದೆ.
ರಾಜ್ಯ ಸರ್ಕಾರವೇ ಪ್ರಕರಣವನ್ನು ಸಿಐಡಿಗೆ ವಹಿಸಿ ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿದೆ ಎಂಬ ಮಾತು ಸಭೆಯಲ್ಲಿ ಕೇಳಿಬಂತು.

ತೆಲಂಗಾಣ ಮುಖ್ಯಮಂತ್ರಿಗೆ ಪತ್ರ
ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ, ಅಲ್ಲದೆ, ಇಲಾಖೆ ಹಣ ತೆಲಂಗಾಣದ ಬ್ಯಾಂಕ್‌ಗಳಿಗೆ ವರ್ಗಾವಣೆ ಆಗಿ ಆ ಹಣವನ್ನು ಬಳಕೆ ಮಾಡಲಾಗಿದೆಯೇ ಎಂಬ ಮಾಹಿತಿಯನ್ನು ಅಲ್ಲಿನ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೋರಿರುವುದಾಗಿಯೂ ಮುಖ್ಯಮಂತ್ರಿ ಸಭೆಗೆ ತಿಳಿಸಿದರು.
ಪರಿಶಿಷ್ಟ ಸಮುದಾಯಕ್ಕೆ ಸೇರಿದ ಸಚಿವರೊಬ್ಬರನ್ನು ಗುರಿಯಾಗಿಟ್ಟುಕೊಂಡು ರಾಜ್ಯ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ, ಪ್ರಕರಣವನ್ನು ಸಿಬಿಐಗೆ ವಹಿಸಲು ಇವರ ಪಾತ್ರವೂ ಇರಬಹುದೆಂದು ಕಿಡಿಕಾರಿದ್ದಾರೆ.
ಇಲಾಖಾ ಮುಖ್ಯಸ್ಥರು ಮತ್ತು ಕಾನೂನು ತಜ್ಷರಿಂದ ವರದಿ ಪಡೆದ ನಂತರ ನಾಗೇಂದ್ರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಿರ್ಧರಿಸಿದೆ.
ರಾಜಕೀಯವಾಗೇ ಎದುರಿಸಬೇಕು
ಆದರೆ, ಇದನ್ನು ನಾವೂ ರಾಜಕೀಯವಾಗೇ ಎದುರಿಸಬೇಕು ಎಂಬ ಮಾತು ಸಭೆಯಲ್ಲಿ ಕೇಳಿಬಂದಿದೆ.
ಜೂನ್ 6ರೊಳಗೆ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ಮಾಡುವುದಾಗಿ ನಿನ್ನೆಯಷ್ಟೇ ಎಚ್ಚರಿಕೆ ನೀಡಿತ್ತು.
ಕಾಕತಾಳೀಯ ಎಂಬಂತೆ ಯೂನಿಯನ್ ಬ್ಯಾಂಕ್‌ನ ಆಡಳಿತ ಮಂಡಳಿ ಕೂಡಾ ಸಿಬಿಐಗೆ ಪತ್ರ ಬರೆದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಬುಡಕಟ್ಟು ಅಭಿವೃದ್ಧಿ ನಿಗಮದ ಹಣವನ್ನು ಬೆಂಗಳೂರಿನ ಎಂ.ಜಿ.ರಸ್ತೆ ಶಾಖೆಯಿಂದ ಬೇರೆಡೆಗೆ ವರ್ಗಾಯಿಸಿ ಅಕ್ರಮ ಎಸಗಿದೆ, ಈ ಬಗ್ಗೆ ತನಿಖೆ ನಡೆಸುವಂತೆ ಬ್ಯಾಂಕ್ ಸಿಬಿಐಗೆ ಕೋರಿದೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಶಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
