ಬೆಂಗಳೂರು:ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದೆ.
ವಿಚಾರಣೆ ಕೈಗೆತ್ತಿಕೊಂಡ ಜನಪ್ರತಿನಿಧಿಗಳ 42ನೇ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.
ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮೊಕದ್ದಮೆ
ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇಕಡ 40ರಷ್ಟು ಕಮೀಷನ್, ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ರೂ., ಮಂತ್ರಿಗಳ ಹುದ್ದೆಗೆ 500 ಕೋಟಿ ರೂ.ಗಳನ್ನು ಹೈಕಮಾಂಡ್‌ಗೆ ನೀಡಿ ಹುದ್ದೆ ಪಡೆದಿದ್ದಾರೆ, ಇವರ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆ ಎಂದು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಆರೋಪ ಮಾಡಿತ್ತು.
ಆ ಪಕ್ಷದ ಮುಖಂಡರುಗಳಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ, ಸಾರ್ವಜನಿಕ ಭಾಷಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು.
ಈ ಆರೋಪದ ಜೊತೆಗೆ ಕೋವಿಡ್ ಕಿಟ್ ಖರೀದಿಯಲ್ಲಿ ಶೇಕಡ 75ರಷ್ಟು ಡೀಲ್, ಪಿಡಬ್ಲೂಡಿ ಗುತ್ತಿಗೆಯಲ್ಲಿ ಶೇಕಡ 40ರಷ್ಟು ಡೀಲ್ ಸೇರಿದಂತೆ ಕಾಮಗಾರಿಗಳಲ್ಲಿ ಭಾರೀ ಮೊತ್ತದ ಕಮೀಷನ್ ಅನ್ನು ಬಿಜೆಪಿ ಸರ್ಕಾರ ಪಡೆದು ಭ್ರಷ್ಟ ಆಡಳಿತ ನೀಡುತ್ತಿದೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು.
ಕಾಂಗ್ರೆಸ್ ಮುಖಂಡರ ವಿರುದ್ಧ ಖಾಸಗಿ ದೂರು
ಇದು ಚುನಾವಣಾ ಸಮಯದಲ್ಲಿ ಬಿಜೆಪಿ ಪಕ್ಷಕ್ಕೆ ಮಾಡಿರುವ ಅಪಮಾನವಾಗಿದೆ, ಆದ್ದರಿಂದ ಕಾಂಗ್ರೆಸ್ ಪಕ್ಷದ ಮುಖಂಡರುಗಳ ವಿರುದ್ಧ ಐಪಿಸಿ ಕಲಂ 499, 500 ರೀತ್ಯಾ ಮಾನನಷ್ಟ ಮೊಕದ್ದಮೆ ಖಾಸಗಿ ದೂರನ್ನು ಬಿಜೆಪಿ ದಾಖಲಿಸಿತ್ತು.
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ್ 2023ರ ಮೇ 8ರಂದು 42ನೇ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಆರೋಪಿಗಳಿಗೆ ನ್ಯಾಯಾಲಯ ಸಮನ್ ಮಾಡಿತ್ತು, ಇಂದು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರು ಖುದ್ದು ಹಾಜರಾಗಿ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡರು.
ನ್ಯಾಯಾಧೀಶರ ಮುಂದೆ ಹಾಜರಿ
ಜಾಮೀನು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬಿಜೆಪಿ ದಾಖಲಿಸಿದ್ದ ಖಾಸಗಿ ದೂರಿನ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದೆ, ಇದು ಸಿವಿಲ್ ಸ್ವರೂಪದ ಪ್ರಕರಣವಾಗಿದೆ, ಕಾನೂನು ರಕ್ಷಕರಾಗಿ, ಪಾಲಕರಾಗಿ ನ್ಯಾಯಾಲಯದ ಸೂಚನೆ ಮೇರೆಗೆ ಇಂದು ನಾನು ನ್ಯಾಯಾಧೀಶರ ಮುಂದೆ ಹಾಜರಾಗಿ, ಜಾಮೀನು ಪಡೆದಿದ್ದೇನೆ ಎಂದರು.
ನನ್ನನ್ನು, ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧವೂ ಖಾಸಗಿ ದೂರು ದಾಖಲಾಗಿತ್ತು, ರಾಹುಲ್ ಗಾಂಧಿಯವರೂ ನ್ಯಾಯಾಲಯಕ್ಕೆ ಹಾಜರಾಗುತ್ತಾರೆ ಎಂದರು.