ಸಿ.ಟಿ.ರವಿ, ಬೋಸರಾಜ್, ಡಾ. ಯತೀಂದ್ರಗೆ ಅವಕಾಶ
ಬೆಂಗಳೂರು: ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ ನ 11 ಸದಸ್ಯ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿವೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ನಾಮ ಪತ್ರ ಸಲ್ಲಿಸಲು ಜೂನ್ 3 ಕಡೇ ದಿನವಾಗಿರುವ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ರಾಷ್ಟ್ರೀಯ ಪಕ್ಷಗಳು ಅಭ್ಯರ್ಥಿಗಳನ್ನು ಪ್ರಕಟಿಸಿವೆ.
ಕಾಂಗ್ರೆಸ್ ನಿಂದ ಸಚಿವ ಎನ್.ಎಸ್.ಬೋಸರಾಜು ಅವರಿಗೆ ಮರು ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರು ವಿಧಾನ ಪರಿಷತ್ ಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ. ಹಾಗೆಯೇ ವಿಧಾನ ಪರಿಷತ್ ಸದಸ್ಯರಾಗಿರುವ ಕೆ. ಗೋವಿಂದರಾಜ್ ಅವರಿಗೂ ಮತ್ತೊಮ್ಮೆ ಮೇಲ್ಮನೆ ಚುನಾವಣಾ ಕಣಕ್ಕಿಳಿಯುವ ಅವಕಾಶ ಕಲ್ಪಿಸಲಾಗಿದೆ.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವಾನ್ ಡಿ ಸೋಜ ಅವರಿಗೂ ಮತ್ತೊಂದು ಅವಕಾಶ ನೀಡಲಾಗಿದೆ. ಅಲ್ಲದೆ, ವಸಂತ್ ಕುಮಾರ್, ಬಿಲ್ಕಿಸ್ ಬಾನೋ, ಜಗದೇವ್ ಗುತ್ತೇದಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ವಿಧಾನಸಭೆಯಲ್ಲಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಕಾಂಗ್ರೆಸ್ ನ ಈ 7 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.
ಆದರೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನಕ್ಕೆ ನಡೆಯಲಿರುವ ವಿಧಾನ ಪರಿಷತ್ ನ ಉಪ ಚುನಾವಣೆಗೂ ಕಾಂಗ್ರೆಸ್ ಈಗಲೇ ಅಭ್ಯರ್ಥಿ ಪ್ರಕಟಿಸಿದೆ. ಬಸನಗೌಡ ಬಾದರ್ಲಿ ಅವರು ಈ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿ ಕೂಡ ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಮಾಜಿ ಸಚಿವ ಸಿ.ಟಿ.ರವಿಗೆ ಅವಕಾಶ ಕಲ್ಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಎನ್. ರವಿ ಕುಮಾರ್ ಅವರಿಗೆ ಮರು ಆಯ್ಕೆಗೆ ಅವಕಾಶ ನೀಡಲಾಗಿದೆ. ಜತೆಗೆ ಎಂ.ಜಿ.ಮೂಳೆ ಅವರಿಗೂ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ.
ಕಾಂಗ್ರೆಸ್ ನಂತೆ ಬಿಜೆಪಿ ಕೂಡ ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯೆ ಆಧಾರದ ಮೇಲೆ ಈ ಮೂರು ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನೂ ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ಒಂದು ಸ್ಥಾನ ಮಾತ್ರ ಪಡೆಯಲ್ಲಷ್ಟೇ ಸಾಧ್ಯವಿದೆ. ಜೆಡಿಎಸ್ ಅಭ್ಯರ್ಥಿಯಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಟಿ.ಎನ್.ಜವರಾಯಿಗೌಡ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಒಂದು ವೇಳೆ ಮೂರು ಪಕ್ಷಗಳು ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಅವಿರೋಧ ಆಯ್ಕೆಯಾಗಲಿದೆ.