ಭಾರೀ ಬೆಟ್ಟಿಂಗ್ ವ್ಯವಹಾರದ ವದಂತಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೃದಯ ತಜ್ಞ ಡಾ. ಮಂಜುನಾಥ್ ಅವರು ಲೋಕಸಭಾ ಚುನಾವಣೆಯಲ್ಲಿ ಎಷ್ಟು ಅಂತರದಿಂದ ಜಯಭೇರಿ ಭಾರಿಸಲಿದ್ದಾರೆ ಎಂಬ ವಿಚಾರವು ಬೆಟ್ಟಿಂಗ್ ಗೆ ಹೆಸರಾಗಿರುವ ‘ಸತ್ತಾ ಮಾರ್ಕೇಟ್’ ನಲ್ಲಿ ಕೋಟ್ಯಾಂತರ ರೂ. ನಷ್ಟು ವ್ಯವಹಾರ ನಡೆದಿರುವ ವದಂತಿ ಹರಡಿ.
ಈ ವಿಚಾರವು ರಾಜಕೀಯ ವಲಯದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಇದರಿಂದ ಲೋಕಸಭಾ ಚುನಾವಣಾ ಫಲಿತಾಂಶ ಭಾರೀ ಕಾತರ ಹಾಗೂ ಕುತೂಹಲದಿಂದ ಎದುರು ನೋಡುವಂತಾಗಿದೆ.
ದಕ್ಷಿಣ ಭಾರತದಲ್ಲೇ ಕುಮಾರಸ್ವಾಮಿ, ಮಂಜುನಾಥ್ ಅವರ ಜೊತೆಗೆ ತಮಿಳುನಾಡಿನ ಬಿಜೆಪಿಯ ಮುಖಂಡ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಗೆಲ್ಲುತ್ತಾರೋ ಅಥವಾ ಸೋಲುತ್ತಾರೋ ಎಂಬ ಬಗ್ಗೆ ಚನ್ನೈ, ಮುಂಬೈ ಹಾಗೂ ಕೊಲ್ಕತ್ತಾ ಸತ್ತಾ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಬೆಟ್ಟಿಂಗ್ ವ್ಯವಹಾರ ನಡೆದಿರುವ ವಿಚಾರ ಚಲಾವಣೆಯಲ್ಲಿದೆ.
ದಕ್ಷಿಣ ಭಾರತದಲ್ಲಿ ಈ ಮೂವರು ಅಭ್ಯರ್ಥಿಗಳ ಮೇಲೆ ಹೆಚ್ಚು ಬೆಟ್ಟಿಂಗ್ ವ್ಯವಹಾರ ಸತ್ತಾ ಮಾರ್ಕೆಟ್ ನಲ್ಲಿ ನಡೆಯಲು ಈ ಮೂವರು ಒಂದಲ್ಲ ಒಂದು ರೀತಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೆಸರು ಮಾಡಿರುವುದು ಪ್ರಮುಖ ಕಾರಣವಾಗಿದೆ.
ಕುಮಾರಸ್ವಾಮಿ ಅವರು ರಾಜಕೀಯವಾಗಿಯು, ಅಣ್ಣಾ ಮಲೈ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿಯು, ಮಂಜುನಾಥ್ ವೈದ್ಯಕೀಯ ಕ್ಷೇತ್ರದಲ್ಲೂ ಪ್ರಸಿದ್ಧರಾಗಿದ್ದಾರೆ.
ಮಂಜುನಾಥ್ ಸ್ಪರ್ಧಿಸಿರುವ ಕ್ಷೇತ್ರ ಬೆಂಗಳೂರು ಗ್ರಾಮಾಂತರದಲ್ಲಿ ಸಂಸದ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಇವರ ಪ್ರತಿಸ್ಪರ್ಧಿಯಾಗಿರುವುದು ಒಂದು ಪ್ರಮುಖ ಅಂಶವಾಗಿದೆ. ಅಲ್ಲದೆ, ಈ ಕ್ಷೇತ್ರ ದೇಶಾದ್ಯಂತ ಗಮನಸೆಳೆದು ಹೈ ವೋಲ್ಟೇಟೇಜ್ ಕ್ಷೇತ್ರವಾಗಿ ಪರಿಗಣಿಸಲಾಗಿತ್ತು.
ಈ ಕ್ಷೇತ್ರ ಸತ್ತಾ ಮಾರ್ಕೆಟ್ ನಲ್ಲಿ ಭಾರೀ ಸದ್ದು ಮಾಡುತ್ತಿದೆಯಂತೆ. ಈಗಾಗಲೇ ಸತ್ತಾ ಮಾರ್ಕೆಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುತ್ತಾರೆ. ಎನ್ ಡಿಎ ಒಕ್ಕೂಟಕ್ಕೆ 315-340 ಸ್ಥಾನ ಬರುತ್ತದೆ ಎಂಬ ವಿಚಾರವೂ ಆರನೇ ಹಂತದ ಮತದಾನ ಮುಗಿದ ನಂತರವೇ ಚಲಾವಣೆಗೆ ಬಂದಿತ್ತಂತೆ. ಜತೆಗೆ ಈ ರೀತಿಯ ಬೆಟ್ಟಿಂಗ್ ಆರಂಭವಾಗಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಹು ಚರ್ಚೆಗೆ ಗ್ರಾಸವಾಗಿವೆ.
ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಬಿಜೆಪಿ 18 ರಿಂದ 20 ಸ್ಥಾನ ಗಳಿಸುತ್ತದೆ ಎಂದು ಸತ್ತಾ ಮಾರ್ಕೆಟ್ ನಲ್ಲಿ ಬೆಟ್ಟಿಂಗ್ ಚಲಾವಣೆಯಾಗಿತ್ತು. ಇದರ ನಡುವೆ ದಕ್ಷಿಣ ಭಾರತದಲ್ಲಿ ಈ ಮೂರು ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲೇ ಹೆಚ್ಚು ಬೆಟ್ಟಿಂಗ್ ವ್ಯವಹಾರ ನಡೆಯುತ್ತಿರುವುದು ಹುಬ್ಬೇರಿಸುವಂತೆ ಮಾಡಿದೆ.