ಬೆಂಗಳೂರು:ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿಗೆ ಮತ ನೀಡಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಿದ್ದ ರಾಜ್ಯದ ಮತದಾರರು ಲೋಕಸಭಾ ಚುನಾಣೆಯಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಎರಡು ಹಂತದ ಚುನಾವಣೆಯಲ್ಲಿ ಇಂದು ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಬಿಜೆಪಿ 17ರಲ್ಲೂ, ಜೆಡಿಎಸ್ ಎರಡರಲ್ಲೂ, ಆಡಳಿತಾರೂಢ ಕಾಂಗ್ರೆಸ್‌ಗೆ ಒಂಭತ್ತು ಸ್ಥಾನಗಳನ್ನು ಮತದಾರರು ನೀಡಿದ್ದಾರೆ.
ಎನ್‌ಡಿಎ ಮೈತ್ರಿಕೂಟಕ್ಕೆ ೧೯ ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಮತದಾರರು ಒಟ್ಟು ಕ್ಷೇತ್ರಗಳಲ್ಲಿ ಸಿಂಹಪಾಲು ನೀಡಿದ್ದು, ಕಾಂಗ್ರೆಸ್ ಕಳೆದ ಬಾರಿ ಗಳಿಸಿದ್ದ ಒಂದು ಸ್ಥಾನದಿಂದ ಒಂಭತ್ತು ಸ್ಥಾನಗಳಿಗೆ ಬಡ್ತಿ ಪಡೆದಿದೆ.
ಬಿಜೆಪಿ ಕಳೆದಕೊಂಡ 8 ಸ್ಥಾನ
ಕಳೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ, ಬಿಜೆಪಿ 8 ಸ್ಥಾನಗಳನ್ನು ಕಳೆದುಕೊಂಡಿದೆ.
ಮೊದಲ ಹಂತದಲ್ಲಿ ನಡೆದ ಹಳೇ ಮೈಸೂರು ಭಾಗದ 14 ಕ್ಷೇತ್ರಗಳ ಪೈಕಿ 12ರಲ್ಲಿ ಎನ್‌ಡಿಎ ಜಯಭೇರಿ ಭಾರಿಸಿದ್ದರೆ, ಕಾಂಗ್ರೆಸ್‌ಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಜಯ ದೊರೆತಿದೆ.
ಎರಡನೇ ಹಂತದ ಚುನಾವಣೆಯಲ್ಲಿ ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ಏಳು ಸ್ಥಾನಗಳನ್ನು ಹಂಚಿಕೊಂಡಿವೆ, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಐದು ಲೋಕಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದೆ.
ಉಭಯ ನಾಯಕರಿಗೆ ಮುಖಭಂಗ
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಮೈಸೂರು-ಕೊಡಗು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಬಿಜೆಪಿ ಪಾಲಾಗಿ ಉಭಯ ನಾಯಕರಿಗೆ ಮುಖಭಂಗ ಉಂಟು ಮಾಡಿದೆ.
ಚಾಮರಾಜನಗರವನ್ನು ಗೆಲ್ಲಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ತೃಪ್ತಿಪಟ್ಟುಕೊಂಡರೂ, ಹಳೇ ಮೈಸೂರು ಭಾಗದಲ್ಲಿ ಶಿವಕುಮಾರ್ ಜೊತೆ ಕೈಜೋಡಿಸಿ ಹೆಚ್ಚು ಸ್ಥಾನ ಗಳಿಸುವಲ್ಲಿ ವಿಫಲರಾಗಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಕ್ಷೇತ್ರದಲ್ಲಿ ಅಳಿಯ ರಾಧಾಕೃಷ್ಣ ಅವರನ್ನು ಗೆಲ್ಲಿಸುವ ಜೊತೆಗೆ ಕಲ್ಯಾಣ ಕರ್ನಾಟಕದ ಎಲ್ಲಾ ಐದು ಕ್ಷೇತ್ರಗಳನ್ನು ಕಾಂಗ್ರೆಸ್ ಬುಟ್ಟಿಗೆ ಹಾಕಿಸಿದ್ದಾರೆ.
ಎನ್‌ಡಿಎ ವಿಜೇತರು
ಬಿಜೆಪಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಧಾರವಾಡ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಬೆಳಗಾವಿ, ಬಸವರಾಜ ಬೊಮ್ಮಾಯಿ ಹಾವೇರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ, ಬಿ.ವೈ.ರಾಘವೇಂದ್ರ ಶಿವಮೊಗ್ಗ, ಗೋವಿಂದ ಕಾರಜೋಳ್ ಚಿತ್ರದುರ್ಗ, ವಿ.ಸೋಮಣ್ಣ ತುಮಕೂರು, ರಮೇಶ್ ಜಿಗಜಿಣಗಿ ವಿಜಾಪುರ, ಪಿ.ಸಿ.ಗದ್ದಿಗೌಡರ್ ಬಾಗಲಕೋಟೆ.
ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ, ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರ, ಡಾ.ಮಂಜುನಾಥ್ ಬೆಂಗಳೂರು ಗ್ರಾಮಾಂತರ, ಪಿ.ಸಿ. ಮೋಹನ್ ಬೆಂಗಳೂರು ಕೇಂದ್ರ, ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ, ಯದುವೀರ ಒಡೆಯರ್ ಮೈಸೂರು-ಕೊಡಗು, ಕೋಟ ಶ್ರೀನಿವಾಸ ಪೂಜಾರಿ ಉಡುಪಿ-ಚಿಕ್ಕಮಗಳೂರು, ಕ್ಯಾಪ್ಟನ್ ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಜೆಡಿಎಸ್‌ನ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಹಾಗೂ ಮಲ್ಲೇಶ್ ಬಾಬು ಕೋಲಾರ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.
ಕಾಂಗ್ರೆಸ್ ವಿಜೇತರು
ಇನ್ನು ಕಾಂಗ್ರೆಸ್‌ನ ಸುನೀಲ್ ಬೋಸ್ ಚಾಮರಾಜನಗರ, ಶ್ರೇಯಸ್ ಪಟೇಲ್ ಹಾಸನ, ಪ್ರಭಾ ಮಲ್ಲಿಕಾರ್ಜುನ್ ದಾವಣಗೆರೆ, ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿ.
ರಾಧಾಕೃಷ್ಣ ದೊಡ್ಡಮನಿ ಗುಲ್ಬರ್ಗ, ಕುಮಾರ ನಾಯಕ್ ರಾಯಚೂರು, ಸಾಗರ್ ಖಂಡ್ರೆ ಬೀದರ್, ರಾಜಶೇಖರ ಬಸವರಾಜ ಇಟ್ನಾಳ್ ಕೊಪ್ಪಳ, ತುಕಾರಾಂ ಬಳ್ಳಾರಿ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜಯ ಗಳಿಸಿದ್ದಾರೆ.
ಕಾಂಗ್ರೆನಿಂದ ಗೆದ್ದಿರುವ ಒಂಭತ್ತು ಮಂದಿಯೂ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡುತ್ತಿದ್ದಾರೆ, ಇವರಲ್ಲಿ ಎಲ್ಲರೂ ಪ್ರಬಲ ರಾಜಕೀಯ ಕುಟುಂಬಗಳಿಂದ ಬಂದವರೇ ಆಗಿದ್ದಾರೆ.
ಗ್ಯಾರಂಟಿ ಪೂರ್ಣ ಲಾಭ ದೊರೆತಿಲ್ಲ
ಗ್ಯಾರಂಟಿಗಳನ್ನೇ ನಂಬಿದ್ದ ಕಾಂಗ್ರೆಸ್‌ಗೆ ಅದರ ಪೂರ್ಣ ಲಾಭ ದೊರೆತಿಲ್ಲ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕದಿದ್ದರೆ ಇಷ್ಟು ಸ್ಥಾನ ಗೆಲ್ಲಲೂ ಸಾಧ್ಯವಿರುತ್ತಿರಲಿಲ್ಲ.
ಕಳೆದ ಬಾರಿಯಂತೆ ಪ್ರಧಾನಿ ಮೋದಿ ಅವರ ಅಲೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಗೆ ಪೂರ್ಣ ಮತ ತಂದು ಕೊಟ್ಟಿಲ್ಲ.