ಬೆಂಗಳೂರು:ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮತದಾರರು ಮಣೆ ಹಾಕಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿದ್ದರಿಂದ ಐದು ಲೋಕಸಭಾ ಕ್ಷೇತ್ರಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ.
ಮಕ್ಕಳು, ಪತ್ನಿ, ಸಂಬಂಧಿಗಳು
ಗೆದ್ದ ಸ್ಥಾನಗಳಲ್ಲಿ ಶೇಕಡ 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು, ಪತ್ನಿ ಇಲ್ಲವೇ ಪಕ್ಷದ ಮುಖಂಡರ ಕುಟುಂಬದವರು ಲೋಕಸಭೆ ಪ್ರವೇಶಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದಿಂದ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದಲೂ, ಅವರ ಅಳಿಯ ಹೃದಯ ತಜ್ಞ ಡಾ.ಮಂಜುನಾಥ್ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರದಿಂದ ಜಯಭೇರಿ ಭಾರಿಸಿ ಲೋಕಸಭೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ಆರು ಸಚಿವರ ಕುಟುಂಬದ ಮಕ್ಕಳು ಹಾಗೂ ಪತ್ನಿಯರಿಗೆ ಟಿಕೆಟ್ ನೀಡಿದ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದಾರೆ.
ಮೊದಲ ಬಾರಿಗೆ ಲೋಕಸಭೆ ಪ್ರವೇಶ
ಚಾಮರಾಜನಗರದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಭರ್ಜರಿ ಜಯ ಸಾಧಿಸಿದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ, ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ದಾವಣಗೆರೆಯಲ್ಲಿ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿ ಪ್ರಭಾಮಲ್ಲಿಕಾರ್ಜುನ್ ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ.
ಸಚಿವರಾದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ, ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ, ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಬಾಗಲಕೋಟೆಯಲ್ಲಿ ಕಣಕ್ಕಿಳಿದು ಸೋಲನುಭವಿಸಿದ್ದಾರೆ.
ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಸಹೋದರ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಲೋಕಸಭೆ ಪ್ರವೇಶಿಸಿದ್ದಾರೆ.
ಇನ್ನು ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ಗುಲ್ಬರ್ಗದಿಂದ ಇದೇ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗುತ್ತಿದ್ದಾರೆ.
ಇನ್ನು ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಶಿವಮೊಗ್ಗದಿಂದ ಲೋಕಸಭೆ ಪ್ರವೇಶಿಸಿದ್ದಾರೆ.
ದಿವಂಗತ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಪುತ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಇದೇ ಮೊದಲ ಬಾರಿಗೆ ದೆಹಲಿ ರಾಜಕಾರಣ ಪ್ರವೇಶಿಸಿದ್ದಾರೆ.
ಸೋಲು ಕಂಡ ದಿಗ್ಗಜರು
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ ಹಾಲಿ ಸಂಸದ ಡಿ.ಕೆ.ಸುರೇಶ್ ಹೀನಾಯ ಸೋಲು ಕಂಡಿದ್ದರೆ, ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಹಾಸನದಲ್ಲಿ ಪೆನ್‌ಡ್ರೈವ್‌ಗೆ ಬಲಿಯಾಗಿದ್ದರೆ, ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್‌ಕುಮಾರ್ ಸೋತಿದ್ದಾರೆ.
ಒಟ್ಟಾರೆ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲಿ ಶೇಕಡ ೫೦ರಷ್ಟು ಕುಟುಂಬ ರಾಜಕಾರಣ ಅಭ್ಯರ್ಥಿಗಳೇ ಜಯಭೇರಿ ಭಾರಿಸಿದ್ದಾರೆ.