ಬೆಂಗಳೂರು:ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿದ್ದೇವೆ, ಕಳೆದ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ದೇಶದಾದ್ಯಂತ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಇಂದಿಲ್ಲಿ
ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಡವರ ಪರ ಪ್ರಣಾಳಿಕೆಯನ್ನು ಘೋಷಿಸಿದ್ದರು, ಅದರಿಂದಾಗಿ ಪಕ್ಷ ಉತ್ತರ ಭಾರತದ ರಾಜ್ಯಗಳಲ್ಲಿ ಹಲವು ಸ್ಥಾನಗಳನ್ನು ಗೆಲ್ಲಲು ಕಾರಣವಾಯಿತು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಿಶ್ರ ಫಲಿತಾಂಶದಿಂದ ಸ್ವಲ್ಪ ಹಿನ್ನಡೆಯಾಯಿತು ಎಂದರು.
ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ
ಕೋಲಾರ ಜಿಲ್ಲೆಯಲ್ಲಿ ನಾಯಕರ ಒಗ್ಗಟ್ಟಿನ ಕೊರತೆಯಿಂದಾಗಿ ಕ್ಷೇತ್ರವನ್ನು ಗೆಲ್ಲುವಲ್ಲಿ ವಿಫಲವಾಗಿದ್ದೇವೆ, ಹಲವಾರು ಬಾರಿ ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಲಿಲ್ಲ.
ಕೋಲಾರ ಜಿಲ್ಲೆಯಲ್ಲಿ ಶಾಸಕರ ಒಗ್ಗಟ್ಟಿನ ಕೊರತೆ ಹಾಗೂ ಶಾಸಕರ ಸ್ವಪ್ರತಿಷ್ಠೆಗಳಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಸೋಲಿಗೆ ಕಾರಣವಾಯಿತು.
ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಜಿಲ್ಲೆಯ ನಾಯಕರಿಗೆ ಬುದ್ಧಿ ಹೇಳಿ ಸರಿ ಮಾಡಲಿ.
ಬಿಜೆಪಿ-ಜೆಡಿಎಸ್ ಹೊಂದಾಣಿಕೆ
ಎಲ್ಲಾ ಕಡೆ ಸಚಿವರು ಉತ್ತಮ ಕೆಲಸ ಮಾಡಿದ್ದಾರೆ, ಪಕ್ಷಕ್ಕೆ ಮತದಾನ ಪ್ರಮಾಣ ಕಡಿಮೆಯಾಗಿಲ್ಲ, ಪಕ್ಷದ ಮತಗಳು ಹೆಚ್ಚಾಗಿಯೇ ಬಂದಿದೆ, ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದಾಗಿ ಅವರ ಗೆಲುವು ಸುಲಭವಾಗಿದೆ.
ಡಿ.ಕೆ.ಸುರೇಶ್ ಉತ್ತಮ ಕೆಲಸ ಮಾಡಿದ್ದು ಅವರ ಸೋಲು ನಿರೀಕ್ಷಿಸಿರಲಿಲ್ಲ, ಅವರನ್ನು ಭೇಟಿ ಮಾಡಿ ಧೈರ್ಯ ತುಂಬುತ್ತೇನೆ ಎಂದರು.