ಬೆಂಗಳೂರು:ಕರ್ನಾಟಕದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಕೋಟ್ಯಂತರ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ಐಆರ್ ದಾಖಲು ಮಾಡಿದೆ.
ಎಫ್ಐಆರ್ ದಾಖಲು ಬೆನ್ನಲ್ಲೇ ಸಚಿವ ನಾಗೇಂದ್ರ ಬಂಧನ ಭೀತಿಯನ್ನು ಎದುರಿಸುತ್ತಿದ್ದಾರೆ.
ಯೂನಿಯನ್ ಬ್ಯಾಂಕ್ನ ಹಿರಿಯ ಅಧಿಕಾರಿಗಳ ದೂರಿನ ಅನ್ವಯ ಸಿಬಿಐ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದೆ.
ಐವರ ವಿರುದ್ಧ ದೂರ
ತಮ್ಮ ಬ್ಯಾಂಕ್ನಲ್ಲಿ ನಡೆದಿರುವ ಕೋಟ್ಯಂತರ ರೂ. ಹಗರಣದಲ್ಲಿ ಮೂವರು ಅಧಿಕಾರಿಗಳು ಸೇರಿ ಐವರ ವಿರುದ್ಧ ದೂರು ನೀಡಿತ್ತು.
ಅಷ್ಟೇ ಅಲ್ಲ, ಪ್ರಕರಣದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು, ಖಾಸಗಿ ವ್ಯಕ್ತಿಗಳು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಇಲಾಖಾ ಹೊಣೆ ಹೊತ್ತಿರುವ ಸಚಿವ ನಾಗೇಂದ್ರ, ನಿಗಮದಲ್ಲಿ ಅವ್ಯವಹಾರ ಆಗಿರುವುದು ನಿಜ, ಆದರೆ ಇದರಲ್ಲಿ ತಮ್ಮ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಸರ್ಕಾರ ಎಸ್ಐಟಿ ರಚನೆ
ಇದರ ಮಧ್ಯೆ ರಾಜ್ಯ ಸರ್ಕಾರ ಸರಿ ಸುಮಾರು 100 ಕೋಟಿ ರೂ.ಗಳಷ್ಟು ಅವ್ಯವಹಾರದ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಿದೆ.
ಎಸ್ಐಟಿ ಈಗಾಗಲೇ ಇಬ್ಬರು ಅಧಿಕಾರಿಗಳು ಸೇರಿ ಕೆಲವು ಕಿಂಗ್ಪಿನ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಬೆನ್ನಲ್ಲೇ ಸಿಬಿಐ ಎಫ್ಐಆರ್ ದಾಖಲು ಮಾಡಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಸಿಬಿಐ ತನಿಖೆ ಆರಂಭಿಸಿರುವುದರಿಂದ ಎಸ್ಐಟಿಯಲ್ಲಿನ ಮೊಕದ್ದಮೆಯನ್ನು ಸಿಬಿಐಗೆ ವಹಿಸಬೇಕಿದೆ.
ರಾಜ್ಯ ಸರ್ಕಾರ ನಿರಾಕರಿಸಿದಲ್ಲಿ ಸಿಬಿಐ ಕೋರ್ಟ್ನ ಮೊರೆ ಹೋಗುವ ಸಾಧ್ಯತೆ ಇದೆ.
ನಾಗೇಂದ್ರಗೆ ಸಿಬಿಐ ನೋಟಿಸ್ ಸಾಧ್ಯತೆ
ಬ್ಯಾಂಕ್ ಅಧಿಕಾರಿಗಳು ನೀಡಿರುವ ದೂರಿನಲ್ಲಿ ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಎಂದು ಹೆಸರಿಸಿರುವ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರಗೆ ಸಿಬಿಐ ನೋಟಿಸ್ ನೀಡುವ ಸಾಧ್ಯತೆ ಹೆಚ್ಚಾಗಿದೆ.
ಹಗರಣದಲ್ಲಿ ಸಚಿವರ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಬಹುದೆಂದು ಉನ್ನತ ಮೂಲಗಳು ತಿಳಿಸಿವೆ.