ಬೆಂಗಳೂರು:ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಆಡಳಿತಾರೂಢ ಕಾಂಗ್ರೆಸ್ ಕೈಹಿಡಿದಿದ್ದಾರೆ.
ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೂರರಲ್ಲೂ, ಎನ್‌ಡಿಎ ಮೈತ್ರಿಕೂಟದ ಜೆಡಿಎಸ್ ಎರಡು ಹಾಗೂ ಬಿಜೆಪಿ ಒಂದರಲ್ಲಿ ಜಯಭೇರಿ ಬಾರಿಸಿದೆ.
ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಮತ ಕೇಳಿದ ಕಾಂಗ್ರೆಸ್‌ಗೆ ಅದರ ಲಾಭ ದೊರೆಯಲಿಲ್ಲ.
ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ಕೇವಲ 9 ಸ್ಥಾನಗಳು ಬಂದು ಉಳಿದವು ಎನ್‌ಡಿಎ ಪಾಲಾಯಿತು.
ಇದುವರೆಗೂ ಶಿಕ್ಷಕರು ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಮತದಾರರು ಅವಕಾಶ ಮಾಡಿಕೊಡುತ್ತಿದ್ದರು, ಆದರೆ, ಈ ಚುನಾವಣೆಯಲ್ಲಿ ಚಿತ್ರಣ ಬದಲಾಗಿದೆ.
ಕಾಂಗ್ರೆಸ್ ಮೂರರಲ್ಲಿ ಜಯ
ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಮೂರರಲ್ಲಿ ಜಯ ಗಳಿಸಿದ್ದರೆ, ಜೆಡಿಎಸ್ ತನ್ನ ಎರಡು ಸ್ಥಾನ ಉಳಿಸಿಕೊಂಡರೆ, ಬಿಜೆಪಿ ತನ್ನ ಪಾಲಿನ ಎರಡು ಕ್ಷೇತ್ರವನ್ನು ಕಳೆದುಕೊಂಡಿದೆ.
ಈಶಾನ್ಯ ಪದವೀಧರ ಕ್ಷೇತ್ರದಿಂದ ಡಾ.ಚಂದ್ರಶೇಖರ್ ಬಸವರಾಜ ಪಾಟೀಲ್, ಬೆಂಗಳೂರು ಪದವೀಧರ ಕ್ಷೇತ್ರದಿಂದ ನ.ರಾಮೋಜಿ ಗೌಡ, ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಿ.ಶ್ರೀನಿವಾಸ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಜಯ ಗಳಿಸಿದ್ದಾರೆ.
ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕೆ.ವಿವೇಕಾನಂದ, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್.ಬೋಜೇ ಗೌಡ, ಜೆಡಿಎಸ್ ಅಭ್ಯರ್ಥಿಗಳಾಗಿ ಪರಿಷತ್ ಪ್ರವೇಶಿಸಿದ್ದಾರೆ.
ಇನ್ನು ನೈಋತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಡಾ.ಧನಂಜಯ ಸರ್ಜಿ ಪರಿಷತ್ತಿಗೆ ಆಯ್ಕೆಗೊಂಡಿದ್ದಾರೆ.