ಬೆಂಗಳೂರು:ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಸರ್ಕಾರ ರಚನೆ ಮಾಡುವ ಸಂದರ್ಭದಲ್ಲೇ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ.
ಮೋದಿ ಅವರು ಭಾನುವಾರ ಸಂಜೆ ಸರ್ಕಾರ ರಚನೆ ಮಾಡುತ್ತಿದ್ದು ಮೊದಲ ಹಂತಲ್ಲೇ ತಮ್ಮ ಸಂಪುಟಕ್ಕೆ ಬಿಜೆಪಿ ಹಾಗೂ ಎನ್‌ಡಿಎ ಕೂಟದ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.
ಸರ್ಕಾರ ರಚನೆ ಹಾಗೂ ಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಹಾಗೂ ಕೇಂದ್ರದ ಮಾಜಿ ಗೃಹ ಸಚಿವ ಅಮಿತ್ ಷಾ ಅವರು, ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದಾರೆ.
ಜನರ ಸೇವೆ ಇಲಾಖೆ
ಚರ್ಚೆ ಸಂದರ್ಭದಲ್ಲೇ, ಸರ್ಕಾರ ರಚನೆ ವೇಳೆ ನೀವೂ ಇರುತ್ತೀರಿ ಎಂಬ ಇಂಗಿತವನ್ನು ವ್ಯಕ್ತಪಡಿಸಿರುವುದಲ್ಲದೆ, ತಮಗೆ ಜನರ ಸೇವೆ ಸಲ್ಲಿಸುವ ಇಲಾಖೆ ದೊರೆಯಲಿದೆ ಎಂಬ ಮಾಹಿತಿಯೂ ನೀಡಿದ್ದಾರೆ.
ಕಳೆದ 5ರಂದು ನಡ್ಡ ಅವರ ಅಧ್ಯಕ್ಷತೆಯಲ್ಲಿ ನಡೆದ ಎನ್‌ಡಿಎ ಕೂಟದ ಮಿತ್ರ ಪಕ್ಷಗಳ ಸಭೆಯಲ್ಲಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು.
ಸಭೆ ನಂತರ ಮೈತ್ರಿಕೂಟದ ಎಲ್ಲಾ ಮುಖಂಡರೊಂದಿಗೆ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡ ಹಾಗೂ ಬಿ.ಎಲ್.ಸಂತೋಷ್ ಅವರು ಅನೌಪಚಾರಿಕವಾಗಿ ಚರ್ಚೆ ನಡೆಸಿದರು.
ಪಕ್ಷದ ಬೆಂಬಲ
ಸಭೆ ಮುಗಿಸಿಕೊಂಡು ನಗರಕ್ಕೆ ಹಿಂತಿರುಗಿದ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ದೆಹಲಿಗೆ ತೆರಳಿ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಮೋದಿ ಅವರನ್ನು ಅಧಿಕೃತವಾಗಿ ನಾಯಕರನ್ನಾಗಿ ಮಾಡುವ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಬೆಂಬಲ ವ್ಯಕ್ತಪಡಿಸಿದರು.
ಭಾನುವಾರ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆ, ಅವರ ತಂದೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬ ವರ್ಗದವರು ಶನಿವಾರ ಬೆಳಗ್ಗೆ ದೆಹಲಿಯತ್ತ ಪ್ರಯಾಣ ಬೆಳೆಸುತ್ತಿದ್ದಾರೆ.
ಮೊದಲ 10 ಸ್ಥಾನದೊಳಗೆ ಅವಕಾಶ
ಮೋದಿ ಸಂಪುಟದಲ್ಲಿ ಕುಮಾರಸ್ವಾಮಿ ಅವರಿಗೆ ಮೊದಲ 10 ಸ್ಥಾನದೊಳಗೆ ಅವಕಾಶ ದೊರೆಯಲಿದೆ, ಅಲ್ಲದೆ, ಕೃಷಿ, ಜಲಸಂಪನ್ಮೂಲ ಇಲ್ಲವೇ ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಒಂದು ಖಾತೆ ದೊರೆಯುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಇದಕ್ಕೂ ಮೊದಲು 1996ರಲ್ಲಿ ರಾಜಕೀಯ ಪ್ರವೇಶ ಮಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಗೊಂಡಿದ್ದರು.
ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ನಂತರ ಕುಮಾರಸ್ವಾಮಿ, ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಗೊಂಡು ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.