ಬೆಂಗಳೂರು:ಸಚಿವರು ಹಾಗೂ ಪಕ್ಷದ ಪ್ರಭಾವೀ ಕುಟುಂಬದವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದರೂ ಹೆಚ್ಚು ಸ್ಥಾನ ಗಳಿಸಲು ಏಕೆ ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ನ ಅಧಿನಾಯಕ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದ ನಂತರ ಪಕ್ಷದ ಕಚೇರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಾಗೂ ಸೋತವರ ಸಭೆಯಲ್ಲಿ ಮಾತನಾಡಿದ ಅವರು, ಸೋತ ಕ್ಷೇತ್ರಗಳ ಬಗ್ಗೆ ವರದಿ ನೀಡಿ ಎಂದು ಸೂಚಿಸಿದ್ದಾರೆ.
ಹಸ್ತಕ್ಷೇಪ ಮಾಡಲಿಲ್ಲ
ಲೋಕಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲಿಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದವರಿಗೇ ಟಿಕೆಟ್ ನೀಡಿದ್ದೇವೆ, ಅದರಲ್ಲೂ ಅವರ ಕುಟುಂಬದ ಸದಸ್ಯರಿಗೇ ಕೊಟ್ಟಿದ್ದೇವೆ.
ಆದರೂ ಕರ್ನಾಟಕದಲ್ಲಿ ಏಕೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಲಿಲ್ಲ, ಅದರಲ್ಲೂ ನಮ್ಮ ಪಕ್ಷವೇ ಅಧಿಕಾರದಲ್ಲಿದೆ, ಹೀಗಿದ್ದೂ ಎಲ್ಲಿ ಲೋಪ ಉಂಟಾಯಿತು ಎಂದು ಪ್ರಶ್ನಿಸಿದ್ದಾರೆ.
ಟಿಕೆಟ್ ಪಡೆದ ಕೆಲವು ಸಚಿವರು ತಮ್ಮ ಮಕ್ಕಳನ್ನೂ ಗೆಲ್ಲಸಿಕೊಳ್ಳಲಾಗಲಿಲ್ಲ, ಹಲವು ಸಚಿವರು ತಮ್ಮ ತಮ್ಮ ಉಸ್ತುವಾರಿ ಕ್ಷೇತ್ರಗಳನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ ಏತಕ್ಕೆ.
ಶ್ರಮ ಹಾಕಿ ಕೆಲಸ ಮಾಡಲಿಲ್ಲವೇ
ಸಚಿವರು ನಿರೀಕ್ಷಿತ ಮಟ್ಟಲ್ಲಿ ಶ್ರಮ ಹಾಕಿ ಕೆಲಸ ಮಾಡಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರಂತೆ.
ಪ್ರತಿಪಕ್ಷಗಳಂತೆ ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ನೀವು ಎಡವಿದಿರಾ, ಆಯಾ ಕ್ಷೇತ್ರಗಳಲ್ಲಿ ಸ್ಥಳೀಯವಾಗಿ ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾದಿರಾ.
ಮುಂದೆ ಯಾವುದೇ ಕಾರಣಕ್ಕೂ ಈ ರೀತಿ ಆಗಬಾರದು, ಪರಿಣಾಮಕಾರಿಯಾಗಿ ಪಕ್ಷವನ್ನು ಸಂಘಟಿಸಿ, ಮುಂದಿನ ಚುನಾವಣೆಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಸರ್ಕಾರ ನಮ್ಮದೇ ಇರುವಾಗ ಎದುರಾಗುವ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆಂದು ಪಕ್ಷದ ನಾಯಕರಿಗೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಸೋಲು-ಗೆಲುವಿನ ಪರಾಮರ್ಶೆ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಲೋಕಸಭಾ ಚುನಾವಣೆಯ ಸೋಲು-ಗೆಲುವಿನ ಕುರಿತು ಶನಿವಾರ ಸಭೆ ಕರೆದು ಪರಾಮರ್ಶೆ ಮಾಡಲಾಗುವುದು.
ಸೋತಿರುವ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವಾಗಿರುವ ಅಂಶಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು ಎಂದರು.