ಬೆಂಗಳೂರು:ನರೇಂದ್ರ ಮೋದಿ ಸಂಪುಟಕ್ಕೆ ಕರ್ನಾಟಕದಿಂದ ಪ್ರಹ್ಲಾದ್ ಜೋಷಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಸೇರ್ಪಡೆ ಖಚಿತ.
ಕರ್ನಾಟಕಕ್ಕೆ ಮತ್ತೊಂದು ಸಚಿವ ಸ್ಥಾನ ವೀರಶೈವ/ಲಿಂಗಾಯತ ಸಮುದಾಯಕ್ಕೆ ದೊರೆಯುವ ಸಾಧ್ಯತೆ ಇದೆ.
ಈ ಸ್ಥಾನಕ್ಕೆ ರಾಜ್ಯದಿಂದ ಆಯ್ಕೆಗೊಂಡಿರುವ ಸಮುದಾಯದ ಆರು ಮಂದಿಯೂ ಪ್ರಬಲ ಪೈಪೋಟಿ ನಡೆಸಿದ್ದಾರೆ.
ಶೆಟ್ಟರ್, ಬೊಮ್ಮಾಯಿ, ರಾಘವೇಂದ್ರ
ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ, ಪಿ.ಸಿ.ಗದ್ದಿಗೌಡರ್ ಈ ಸಮುದಾಯದಿಂದ ಕೇಂದ್ರದಲ್ಲಿ ಸ್ಥಾನ ಪಡೆಯಲು ತಮ್ಮದೇ ಆದ ಪ್ರಭಾವದಿಂದ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ರಾಘವೇಂದ್ರ ಮತ್ತು ಗದ್ದಿಗೌಡರ್ ಅನುಕ್ರಮವಾಗಿ 4 ಮತ್ತು 5ನೇ ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.
ಉಳಿದ ಮೂವರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಸೇವೆ ಸಲ್ಲಿಸಿದ್ದರೂ ಲೋಕಸಭೆಗೆ ಇದೇ ಪ್ರಥಮ ಬಾರಿಗೆ ಆಯ್ಕೆಗೊಂಡಿದ್ದಾರೆ.
ಯಡಿಯೂರಪ್ಪ ದೆಹಲಿಗೆ
ಪುತ್ರ ರಾಘವೇಂದ್ರನಿಗೆ ಮಂತ್ರಿ ಸ್ಥಾನ ಕೊಡಿಸಲು ಯಡಿಯೂರಪ್ಪ ಪಣತೊಟ್ಟಂತಿದೆ, ಈ ಕಾರಣಕ್ಕಾಗಿಯೇ ಅವರು ದೆಹಲಿಗೆ ತೆರಳಿದ್ದಾರೆ.
ಲೋಕಸಭೆಗೆ ಸತತವಾಗಿ ನಾಲ್ಕನೇ ಬಾರಿ ಆಯ್ಕೆಗೊಂಡಿರುವ ರಾಘವೇಂದ್ರ ಅವರಿಗೆ ಹಿಂದಿನ ಸರ್ಕಾರದಲ್ಲೂ ಮಂತ್ರಿ ಆಗುವುದು ಕೊನೆ ಗಳಿಗೆಯಲ್ಲಿ ತಪ್ಪಿದೆ, ಈ ಬಾರಿಯಾದರೂ ಅವಕಾಶ ಮಾಡಿಕೊಡಿ ಎಂದು ಯಡಿಯೂರಪ್ಪ ಮನವಿ ಮಾಡಲಿದ್ದಾರಂತೆ.
ಚುನಾವಣೆಗೂ ಮುನ್ನ ಬೊಮ್ಮಾಯಿ ಮತ್ತು ಸೋಮಣ್ಣಗೆ ನೀವು ಗೆದ್ದು ಬನ್ನಿ ದೆಹಲಿಯಲ್ಲಿ ನಿಮಗೆ ಒಳ್ಳೆ ಅವಕಾಶ ಸಿಗಲಿದೆ ಎಂದು ಅಮಿತ್ ಷಾ ಭರವಸೆ ನೀಡಿದ್ದರಂತೆ.
ಕಾಂಗ್ರೆಸ್‌ಗೆ ತೆರಳಿದ ಜಗದೀಶ್ ಶೆಟ್ಟರ್ ಅವರನ್ನು ಹಿಂದಕ್ಕೆ ಕರೆತರುವ ಸಮಯದಲ್ಲಿ ಬಿಜೆಪಿ ವರಿಷ್ಠರು ಸಚಿವ ಸ್ಥಾನದ ಭರವಸೆ ನೀಡಿದ್ದರಂತೆ, ಇದನ್ನೇ ಮುಂದಿಟ್ಟುಕೊಂಡು ಇವರೆಲ್ಲರೂ ಪ್ರಯತ್ನ ನಡೆಸಿದ್ದಾರೆ.
ರಮೇಶ್ ಜಿಗಜಿಣಗಿ
ಕರ್ನಾಟಕದಿಂದ ಅತಿ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಗೊಂಡಿರುವ ಪರಿಶಿಷ್ಟ ಜಾತಿಗೆ ಸೇರಿದ ರಮೇಶ್ ಜಿಗಜಿಣಗಿ ಲಾಬಿ ಮಾಡದಿದ್ದರೂ ತಮಗೂ ಅವಕಾಶ ಸಿಗಬಹುದೆಂಬ ಆಶಾಭಾವನೆ ಹೊಂದಿದ್ದಾರೆ.
ವೀರಶೈವ ಸಮುದಾಯದ ಗದ್ದಿಗೌಡರ್ ಐದನೇ ಬಾರಿಗೆ ಲೋಕಸಭೆ ಪ್ರವೇಶಿಸಿರುವುದರಿಂದ ಹಿರಿತನದಲ್ಲಿ ಮಂತ್ರಿ ಸ್ಥಾನ ದಕ್ಕಲಿದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಯಡಿಯೂರಪ್ಪ ಮಾತ್ರ ಪುತ್ರನಿಗೆ ಅಧಿಕಾರ ಕೊಡಿಸಲು ತಮ್ಮ ಪ್ರಭಾವ ಬೀರಿದ್ದಾರೆ, ಆದರೆ ಕರ್ನಾಟಕಕ್ಕೆ ಮೂರನೇ ಸ್ಥಾನ ಕೊಡುವ ಬಗ್ಗೆ ಇಂದು ತಡರಾತ್ರಿ ನಿರ್ಧಾರವಾಗಲಿದೆ.
ಲೋಕಸಭಾ ಅಧ್ಯಕ್ಷ ಸ್ಥಾನ
ಪ್ರಹ್ಲಾದ್ ಜೋಷಿ ಅವರನ್ನು ಲೋಕಸಭಾ ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ, ಒಂದು ವೇಳೆ ಅವರನ್ನು ಈ ಹುದ್ದೆಗೆ ಸೀಮಿತಗೊಳಿಸಿದರೆ, ಪಂಚ ಮುಖಂಡರಲ್ಲಿ ಒಬ್ಬರಿಗೆ ಅಧಿಕಾರ ಖಚಿತ.
ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ನಾಳೆ ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದು ಇದಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಮತ್ತು ಮಾಜಿ ಸಂಸದರಿಗೆ ಪ್ರಧಾನಿ ಕಾರ್ಯಾಲಯದಿಂದಲೇ ಆಹ್ವಾನ ಬಂದಿದೆ.
