ಬೆಂಗಳೂರು:ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಸೋಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಬಾಂಬ್ ಸಿಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೊರಕುವ ಮುಖ್ಯಮಂತ್ರಿ ಹುದ್ದೆ ತಪ್ಪಿಸಲು ಸಿದ್ದರಾಮಯ್ಯ ಹಿಂದಿರುವ ಅಹಿಂದ ಒಕ್ಕೂಟ ತಮಗೆ ಬೇಡವಾದವರನ್ನು ಚುನಾವಣೆಯಲ್ಲಿ ಸೋಲಿಸಲು ಪ್ರಮುಖ ಪಾತ್ರ ವಹಿಸಿತ್ತೆಂದು ದೂರಿದ್ದಾರೆ.
ಶಿವಕುಮಾರ್ ಬಲ ಕುಗ್ಗಿಸುವ ಪ್ರಯತ್ನ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಇರಬೇಕೆಂಬ ಏಕೈಕ ಕಾರಣಕ್ಕಾಗಿ ಸುರೇಶ್ ಅವರನ್ನು ಸೋಲಿಸಿ ಶಿವಕುಮಾರ್ ಬಲ ಕುಗ್ಗಿಸುವ ಮೊದಲ ಪ್ರಯತ್ನ ಮಾಡಿದ್ದಾರೆ.
ಸುರೇಶ್ ಸೇರಿದಂತೆ ರಾಜ್ಯದಲ್ಲಿ ಕೆಲವರನ್ನು ಸೋಲಿಸಲು ಸಿದ್ದರಾಮಯ್ಯ ಮತ್ತವರ ಬಳಗ ಚುನಾವಣೆಗೂ ಮುನ್ನವೇ ತಂತ್ರ ಹೂಡಿತ್ತು.
ಇದೇ ಕಾರಣಕ್ಕಾಗಿ ಸಚಿವರಾದ ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಾಜಣ್ಣ ಸೇರಿದಂತೆ ಅಹಿಂದ ಸಚಿವರುಗಳು ನಿರಂತರ ಸಭೆ ನಡೆಸಿದ್ದರು.
ನನಗೆ ಮೊದಲೇ ಈ ವಿಷಯ ತಿಳಿದಿತ್ತು, ನಾನು ಚುನಾವಣೆಗೂ ಮುನ್ನವೇ ಸುರೇಶ್ ಅವರನ್ನು ಈ ಬಾರಿ ಎರಡು ಲಕ್ಷ ಮತಗಳ ಅಂತರಗಳಿಂದ ಸೋಲಿಸುತ್ತಾರೆ ಎಂದು ಹೇಳಿದ್ದೆ, ಅಂದು ಯಾರೂ ನಂಬಲಿಲ್ಲ, ಇದೀಗ ಅವರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ರಾಜಕೀಯ ದ್ರುವೀಕರಣ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶವೇ ಕರ್ನಾಟಕದಲ್ಲಿ ರಾಜಕೀಯ ದ್ರುವೀಕರಣಕ್ಕೆ ನಾಂದಿ ಹಾಡಲಿದೆ.
ಈಗಾಗಲೇ ಬೆಳಗಾವಿಯಲ್ಲಿ ಇದರ ಕಿಚ್ಚು ಹೊತ್ತಿಕೊಂಡಿದೆ, ಮುಂದೆ ಅದು ಚಾಮರಾಜನಗರದವರೆಗೂ ಹಬ್ಬಿಕೊಳ್ಳುತ್ತದೆ ಕಾದು ನೋಡಿ ಎಂದಿದ್ದಾರೆ.
ಈ ಸೋಲೇ ಸರ್ಕಾರದ ಪತನಕ್ಕೂ ನಾಂದಿ ಆಗುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ.
ಸಿದ್ದರಾಮಯ್ಯ ಗುಂಪು ಯಾವುದೇ ಕಾರಣಕ್ಕೂ ಶಿವಕುಮಾರ್ ಮುಖ್ಯಮಂತ್ರಿ ಆಗಬಾರದು, ಅವರು ಆಗುವುದೇ ಆದರೆ, ಹಿಂದೆ ಕುಮಾರಸ್ವಾಮಿ ಆಡಳಿತದಲ್ಲಿ ಹೇಗೆ ಆಪರೇಷನ್ ಕಮಲವಾಯಿತೋ ಅದು ಮತ್ತೆ ಮರುಕಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.