ಬೆಂಗಳೂರು:ಲೋಕಸಭೆಗೆ ಆಯ್ಕೆಗೊಂಡಿರುವ ಡಾ.ಮಂಜುನಾಥ್ ಅವರಿಗೆ ಕೇಂದ್ರದಲ್ಲಿ ಮಂತ್ರಿ ಇಲ್ಲವೇ ಆರೋಗ್ಯ ಕ್ಷೇತ್ರದಲ್ಲಿ ಒಂದು ಉನ್ನತ ಹುದ್ದೆ ಕೊಡಿಸಲು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಯತ್ನಿಸುತ್ತಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಮಂಜುನಾಥ್ ಅವರು ಮಾಡಿರುವ ಸಾಧನೆ ಕೇವಲ ಆ ಸಂಸ್ಥೆಗೆ ಸೀಮಿತವಾಗದೆ, ಇಡೀ ರಾಷ್ಟ್ರಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂಬುದಷ್ಟೇ ಅವರ ಮನವಿ.
ಇತಿಮಿತಿಯಲ್ಲಿ ಸೂಕ್ತ ಸ್ಥಾನ
ತಮ್ಮ ಇತಿಮಿತಿಯಲ್ಲಿ ಮಂಜುನಾಥ್ ಅವರಿಗೆ ಹುದ್ದೆ ಕೊಡಿಸಲು ಸುಧಾಮೂರ್ತಿ ದೆಹಲಿ ಮಟ್ಟದಲ್ಲಿ ಲಾಬಿ ಮಾಡಿದ್ದಾರೆ.
ಕರ್ನಾಟಕದಿಂದ ಕುಮಾರಸ್ವಾಮಿ ಅವರಿಗೆ ನೀಡುತ್ತಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಮಂಜುನಾಥ್ ಅವರಿಗೆ ಮಂತ್ರಿ ಸ್ಥಾನ ದೊರೆಯುವ ಸಾಧ್ಯತೆಯೇ ಇಲ್ಲ.
ಆದರೆ, ಮಂಜುನಾಥ್ ಅವರ ಸೇವೆಯನ್ನು ಕೇಂದ್ರಕ್ಕೆ ಬಳಸಿಕೊಳ್ಳಬೇಕೆಂಬ ಭಾವನೆ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರಲ್ಲಿ ಇದೆ.
ಸುಧಾಮೂರ್ತಿ ಅವರ ಪ್ರಯತ್ನ
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರನ್ನು ಬಳಸಿಕೊಳ್ಳುವ ಉದ್ದೇಶ ಮೋದಿ ಅವರಲ್ಲಿದೆ. ಇದರೊಂದಿಗೆ ಸುಧಾಮೂರ್ತಿ ಅವರ ಪ್ರಯತ್ನವೂ ನಡೆದಿದೆ.
ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸುಧಾಮೂರ್ತಿ ಅವರು ಮಂಜುನಾಥ್ ಜೊತೆ ಕೈಜೋಡಿಸಿ ಜಯದೇವ ಸಂಸ್ಥೆ ಆವರಣದಲ್ಲೇ ಇನ್ಫೋಸಿಸ್ ಫೌಂಡೇಷನ್ ತುರ್ತು ಚಿಕಿತ್ಸಾ ಘಟಕವನ್ನು ತನ್ನ ಸ್ವಂತ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದೆ.
ಅಷ್ಟೇ ಅಲ್ಲ, ಜಯದೇವ ಸಂಸ್ಥೆಯಲ್ಲಿ ಬಡವರ ಚಿಕಿತ್ಸೆಗಾಗಿ ಮೀಸಲಿರುವ ನಿಧಿಗೆ ಪರೋಕ್ಷವಾಗಿ ಸುಧಾಮೂರ್ತಿ ಅವರು ಆರ್ಥಿಕ ಸಹಾಯ ನೀಡುತ್ತಿದ್ದರು, ಇದರಿಂದ ಎಷ್ಟೋ ಮಂದಿ ಬಡವರಿಗೆ ವೈದ್ಯಕೀಯ ಸೌಲಭ್ಯ ದೊರೆತಿದೆ.