ಟಿಡಿಪಿ, ಜೆಡಿಯು ಸಂಸದರಿಗಿಂತ ಮುಂಚೆ ಹೆಚ್ ಡಿಕೆ ಪ್ರಮಾಣ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ದೊಡ್ಡ ಗೌರವ ನೀಡಿದ್ದಾರೆ.
ಪ್ರಧಾನಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ರಚನೆ ಸಂದರ್ಭದಲ್ಲಿ ಜೆಡಿಯು ಮತ್ತು ಟಿಡಿಪಿ ದೊಡ್ಡ ಸಂಖ್ಯೆಯಲ್ಲಿ ಗೆದ್ದಿದ್ದರೂ ಕುಮಾರಸ್ವಾಮಿ ಅವರಿಗೆ ಬಿಜೆಪಿಯ ಹಿರಿಯ ನಾಯಕರು ಗೌಪ್ಯತಾ ಪ್ರಮಾಣ ವಚನ ಪಡೆದ ನಂತರ ಕುಮಾರಸ್ವಾಮಿ ಅವರಿಗೆ ಪ್ರಮಾಣ ವಚನ ಸ್ವೀಕರಿಸುವ ಅವಕಾಶ ನೀಡುವ ಮೂಲಕ ದೊಡ್ಡ ಗೌರವ ನೀಡಿದ್ದಾರೆ.
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸುವುದಲ್ಲದೆ, ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಸಾಧಿಸುವುದು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಲ್ಲಿ ಇರುವ ಗೌರವ ಭಾವನೆಯಿಂದ ಕುಮಾರಸ್ವಾಮಿಗೆ ಇಂತಹ ಅವಕಾಶ ದೊರೆತಿದೆ.
ಕುಮಾರಸ್ವಾಮಿ ಅವರಲ್ಲದೆ, ಹಿಂದಿನ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ, ನಿರ್ಮಲ ಸೀತಾರಾಮನ್ ಅವರು ರಾಜ್ಯ ಪ್ರತಿ ನಿಧಿಸುವ ಕೇಂದ್ರ ಸಚಿವರಾಗಿದ್ದಾರೆ. ಅಚ್ಚರಿ ಎಂಬಂತೆ ತುಮಕೂರು ಸಂಸದ ವಿ.ಸೋಮಣ್ಣ ಅವರಿಗೂ ಪ್ರಧಾನಿ ಸಚಿವ ಸ್ಥಾನ ನೀಡಿದ್ದಾರೆ.
ಸೋಮಣ್ಣ ಅವರ ಜೊತೆಗೆ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ಅವರು ಕೂಡ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವೀರಶೈವ ಸಮುದಾಯದಿಂದ ಐವರು ಸಂಸದರು ಪ್ರಬಲ ಪೈಪೋಟಿ ನಡೆಸಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮಾತಿಗೆ ಗೌರವ ನೀಡಿದ್ದ ವಿ.ಸೋಮಣ್ಣ ಅವರಿಗೆ ಅವಕಾಶ ದೊರೆತಿದೆ.
ಕೇಂದ್ರದಲ್ಲಿ ಸಂಪುಟ ಸ್ಥಾನ ಪಡೆಯಲು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರಲ್ಲದೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸ್ಥಾನ ಕಲ್ಪಿಸಲು ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಸರತ್ತು ನಡೆಸಿದರೂ ಫಲ ನೀಡಲಿಲ್ಲ.
ಆದರೆ, ಯಡಿಯೂರಪ್ಪ ಅವರನ್ನು ಸದಾ ವಿರೋಧಿಸುವ ಸೋಮಣ್ಣ ಅವರಿಗೆ ಮಣೆ ಹಾಕುವ ಮೂಲಕ ಕರ್ನಾಟಕದಲ್ಲಿ ವೀರಶೈವ ಸಮುದಾಯದಲ್ಲಿ ಪರ್ಯಾಯ ನಾಯಕರ ಬೆಳವಣಿಗೆಗೆ ದಾರಿ ಮಾಡಿದ್ದಾರೆ.
ಮೋದಿ ಅವರು ತಮ್ಮ ಸಂಪುಟ ರಚನೆಯಲ್ಲಿ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಒಂದು ಸ್ಥಾನ ಮಾತ್ರ ದೊರೆತಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ 14 ಕ್ಷೇತ್ರಗಳ ಪೈಕಿ 12 ಲೋಕಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಮೈತ್ರಿಕೂಟ ಜಯಭೇರಿ ಭಾರಿಸಿತ್ತು. ಇದೇ ಕಾರಣಕ್ಕೆ ಒಕ್ಕಲಿಗ ಸಮುದಾಯದವರಿಗೆ ಎರಡು ಸ್ಥಾನ ಸೇರಿದಂತೆ ಒಟ್ಟಾರೆ ಮೂರು ಸಚಿವ ಸ್ಥಾನವನ್ನು ನೀಡಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಜನರು ಮಾಡಿದ್ದ ಆಶೀರ್ವಾದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಮೂವರು ಸಂಸದರನ್ನು ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಿದ್ದಾರೆ ಎಂದು ಹೇಳಲಾಗುತ್ತಿದೆ.
