ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ರಾಜಕಾರಣಕ್ಕೆ ವಾಪಸ್ಸು ಬರುತ್ತಾರೆ ಎಂಬ ಮಾತು ಮೆಲ್ಲಗೆ ಕೇಳತೊಡಗಿದೆ. ಲೋಕಸಭಾ ಚುನಾವಣೆಯಲ್ಲಿ ಗೆದ್ದು ದಿಲ್ಲಿ ಗದ್ದುಗೆ ಹಿಡಿಯಲು ಕಾಂಗ್ರೆಸ್ ವಿಫಲವಾಗಿರುವುದೇ ಇದಕ್ಕೆ ಕಾರಣ.
ಅಂದ ಹಾಗೆ ಲೋಕಸಭಾ ಚುನಾವಣೆಗಳು ಘೋಷಣೆಯಾದವಲ್ಲ ಆ ಸಂದರ್ಭದಲ್ಲಿ ಚುನಾವಣಾ ತಂತ್ರಗಾರಿಕೆಗೆ ಅಂತ ರಾಜ್ಯದ ಕಾಂಗ್ರೆಸ್ ನಾಯಕರು ದಿಲ್ಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲಿಸಲು ನೀವು ಕೆಲಸ ಮಾಡಬೇಕು ಎಂದು ರಾಜ್ಯದ ನಾಯಕರಿಗೆ ಹೇಳಿದ್ದಾರೆ.
ನಾನು ಎಐಸಿಸಿ ಅಧ್ಯಕ್ಷನಾಗಿರುವುದರಿಂದ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಅಂತ ಪಕ್ಷ ಬಯಸುತ್ತದೆ. ಹೀಗಾಗಿ ನಿಮ್ಮ ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯವಿರಲಿ, ಆದರೆ ಅದನ್ನೆಲ್ಲ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿ, ಕರ್ನಾಟಕದಲ್ಲಿ ಹದಿನೈದಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿಕೊಂಡು ಬನ್ನಿ ಅಂತ ಖರ್ಗೆಯವರು ಹೇಳಿದಾಗ ಸಭೆಯಲ್ಲಿದ್ದ ನಾಯಕರು ಯಸ್ ಸಾರ್ ಎಂದಿದ್ದಾರೆ.
ಇಷ್ಟಾದ ನಂತರವೂ ಮುಂದುವರಿದ ಖರ್ಗೆಯವರು, ನೀವು ಕರ್ನಾಟಕದಿಂದ ಹೆಚ್ಚು ಸೀಟು ಗೆಲ್ಲಿಸಿಕೊಂಡು ಬಂದರೆ ಇಂಡಿಯಾ ಒಕ್ಕೂಟಕ್ಕೆ ಬಲ ಬರುತ್ತದೆ.ಆ ಮೂಲಕ ಒಕ್ಕೂಟ ಕೇಂದ್ರದ ಅಧಿಕಾರ ಹಿಡಿಯಲು ಅನುಕೂಲವಾಗುತ್ತದೆ. ಒಂದು ವೇಳೆ ನೀವು ಹೆಚ್ಚು ಸೀಟು ಗೆಲ್ಲಿಸಿಕೊಂಡು ಬರದೆ ಇದ್ದರೆ ನಾನು ನೈತಿಕವಾಗಿ ಈ ಹುದ್ದೆಯಲ್ಲಿ ಮುಂದುವರಿಯುವುದು ಕಷ್ಟ. ಅರ್ಥಾತ್, ನಾನು ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕಾಗುತ್ತದೆ. ಹೀಗೆ ರಾಜೀನಾಮೆ ಕೊಟ್ಟ ನಂತರ ನಾನೇನು ಮಾಡಲಿ, ಕರ್ನಾಟಕಕ್ಕೆ ಬರುವುದನ್ನು ಹೊರತುಪಡಿಸಿ ನನ್ನ ಬಳಿ ಯಾವ ದಾರಿಯೂ ಇಲ್ಲ.
ಹಾಗಂತ ನಾನು ಸುಖಾ ಸುಮ್ಮನೆ ಕರ್ನಾಟಕಕ್ಕೆ ಮರಳಲು ಸಾಧ್ಯವಿಲ್ಲವಲ್ಲ, ಯಾಕೆಂದರೆ ಅಲ್ಲಿ ಪಕ್ಷಕ್ಕಾಗಿ ನಾಲ್ಕು ದಶಕಗಳ ಕಾಲ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಟ್ಟು ಕರ್ನಾಟಕಕ್ಕೆ ಮರಳಿದರೆ ನಿಶ್ಚಿತವಾಗಿ ನಾನು ನನ್ನ ಪಾಲು ಕೇಳುತ್ತೇನೆ ಎಂದಿದ್ದಾರೆ.
ಅವತ್ತು ಖರ್ಗೆಯವರಾಡಿದ ಮಾತನ್ನು ಸಭೆಯಲ್ಲಿದ್ದ ರಾಜ್ಯದ ನಾಯಕರು ಅಷ್ಟೇನೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಅದರಲ್ಲೂ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಲು ಪಕ್ಷಕ್ಕೆ ಸಾಧ್ಯವಾಗದೆ ಇರುವುದರಿಂದ ಅವತ್ತು ಖರ್ಗೆಯವರಾಡಿದ ಮಾತಿಗೆ ವಿಶೇಷ ಅರ್ಥ ಕಾಣಿಸತೊಡಗಿದೆ.
ಒಂದು ವೇಳೆ ಅವರು ಎಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿ ಕರ್ನಾಟಕಕ್ಕೆ ಮರಳಿದರೆ ಸುಮ್ಮನೆ ಕೂರುತ್ತಾರಾ ಅಥವಾ ದಿಲ್ಲಿಯ ಸಭೆಯಲ್ಲಿ ಅವರೇ ಹೇಳಿದಂತೆ ಇಲ್ಲಿ ತಮ್ಮ ಪಾಲು ಕೇಳುತ್ತಾರಾ ಎಂಬುದು ರಾಜ್ಯ ಕಾಂಗ್ರೆಸ್ಸಿಗರ ಕುತೂಹಲ.
ಅಂದ ಹಾಗೆ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕಕ್ಕೆ ಮರಳಿ ಬಂದರೆ ಅವರ ಪಾಲು ಅಂತಿರುವುದು ಕೇವಲ ಮುಖ್ಯಮಂತ್ರಿ ಸ್ಥಾನ. ಹಾಗೊಂದು ವೇಳೆ ಈ ಪಾಲನ್ನು ಅವರು ಕೇಳಿದರೆ ತಕ್ಷಣಕ್ಕೆ ಅದು ಸಾಧ್ಯವಾಗದೆ ಇರಬಹುದು.
ಯಾಕೆಂದರೆ ಮುಖ್ಯಮಂತ್ರಿ ಪಟ್ಟದಲ್ಲಿ ಸಿದ್ದರಾಮಯ್ಯ ಇರುವಾಗ ಅವರ ಕೋಟಾ ಮುಗಿಸಿಯೇ ಮುಂದಡಿ ಇಡಬೇಕು. ಆದರೆ ಇನ್ನೊಂದು ವರ್ಷ ಕಳೆದ ನಂತರ ಈ ವಿಷಯ ಚಾಲನೆಗೆ ಬಂದರೆ, ’ನೋ, ನೋ ಅದು ಸಾಧ್ಯವಿಲ್ಲ’ ಅಂತ ನಿಷ್ಠುರವಾಗಿ ಹೇಳಲು ಕಾಂಗ್ರೆಸ್ ವರಿಷ್ಟರಿಗೆ ಸಾಧ್ಯವೇ ಎಂಬುದು ಅವರ ಯೋಚನೆ.
ಅವರ ಪ್ರಕಾರ, ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಸಕ್ಸಸ್ ಆಗಿದ್ದಾರೆ. ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರದೆ ಇರಬಹುದು. ಆದರೆ ಅವರು ಅಧ್ಯಕ್ಷರಾದ ನಂತರ ಕಾಂಗ್ರೆಸ್ ಪಕ್ಷ ಸಂಸತ್ತಿನಲ್ಲಿ ನೂರರ ಗಡಿ ತಲುಪಿದೆ. ಯಾವ ದೃಷ್ಟಿಯಿಂದ ನೋಡಿದರೂ ಇದು ದೊಡ್ಡ ಸಾಧನೆ. ಹೀಗಿರುವಾಗ ಖರ್ಗೆಯವರು ಮುಂದಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣಕ್ಕೆ ಮರಳಿದರೆ ಮತ್ತು ಮುಖ್ಯಮಂತ್ರಿಯಾಗಲು ಬಯಸಿದರೆ ಹೈಕಮಾಂಡ್ ನಿಶ್ಚಿತವಾಗಿಯೂ ಅದನ್ನು ಪರಿಗಣಿಸಲಿದೆ.
ಅಂದ ಹಾಗೆ ನಿರ್ದಿಷ್ಟ ಕಾಲದ ನಂತರ ಖರ್ಗೆಯವರು ಸಿಎಂ ಆಗಲಿ ಅಂತ ಹೈಕಮಾಂಡ್ ಬಯಸಿದರೆ ಅದನ್ನು ಸ್ವತಃ ಸಿದ್ದರಾಮಯ್ಯ ಬೆಂಬಲಿಸಿದರೂ ಅಚ್ಚರಿಯಿಲ್ಲ ಎಂಬುದು ಇಂತವರ ಮಾತು.
ಯಡಿಯೂರಪ್ಪ ಷಾಕ್ – ಸೋಮಣ್ಣ ರಾಕ್
ಈ ಮಧ್ಯೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಮಾಜಿ ಸಿಎಂ ಯಡಿಯೂರಪ್ಪ ಬಣಕ್ಕೆ ಭ್ರಮನಿರಸನವಾಗಿದೆ.
ಕಾರಣ ಮೋದಿಯವರ ಸಂಪುಟಕ್ಕೆ ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಸೇರಿಸಲು ಯಡಿಯೂರಪ್ಪ ಸತತ ಪ್ರಯತ್ನ ಮಾಡಿದ್ದರು.
ಕಾಂಗ್ರೆಸ್ಸಿನ ಗ್ಯಾರಂಟಿ ಅಲೆಯ ನಡುವೆ ಬಿಜೆಪಿ ಹದಿನೇಳು ಸ್ಥಾನ ಗೆಲ್ಲಲು ತಮ್ಮ ಶ್ರಮ ಕಾರಣ ಎಂಬ ಮೆಸೇಜು ರವಾನಿಸುತ್ತಾ, ನಾಲ್ಕನೇ ಬಾರಿ ಗೆದ್ದಿರುವ ರಾಘವೇಂದ್ರ ಅವರಿಗೆ ಮಂತ್ರಿಗಿರಿ ಕೊಡುವಂತೆ ವರಿಷ್ಟರನ್ನು ಕೋರಿದ್ದರು.
ಆದರೆ ಯಡಿಯೂರಪ್ಪ ಅದೇನೇ ಲಾಬಿ ಮಾಡಿದರೂ ಮೋದಿ-ಅಮಿತ್ ಷಾ ಜೋಡಿ ಜಪ್ಪಯ್ಯ ಅಂದಿಲ್ಲ, ಬದಲಿಗೆ ಯಡಿಯೂರಪ್ಪ ಅವರ ಕಟ್ಟಾ ವಿರೋಧಿ ವಿ.ಸೋಮಣ್ಣ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ಮೂಲಕ ಷಾಕ್ ಕೊಟ್ಟಿದೆ.
ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಹದಿನೇಳು ಸೀಟು ಪಡೆಯಲು ನಮ್ಮ ಶ್ರಮ ಕಾರಣ ಅಂತ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಷ್ಟೇ ಹೇಳಿಕೊಂಡರೂ ಮೋದಿ-ಅಮಿತ್ ಷಾ ಅದನ್ನು ನಂಬುತ್ತಿಲ್ಲ.
ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ದಿಲ್ಲಿಗೆ ಹೋಗಿದ್ದರಲ್ಲ, ಆ ಸಂದರ್ಭದಲ್ಲಿ ಅವರ ಜತೆ ಮಾತನಾಡಿದ ಅಮಿತ್ ಷಾ ಅವರು, ಕುಮಾರ್ ಸೋಮೀಜಿ, ನಮಗೆ ಎಲ್ಲ ಗೊತ್ತಿದೆ, ಒಂದು ವೇಳೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳದೆ ಹೋಗಿದ್ದರೆ ನಮಗೆ ಹತ್ತು ಸೀಟು ಬರುವುದು ಕಷ್ಟವಿತ್ತು ಎಂದಿದ್ದಾರೆ.
ಅರ್ಥಾತ್, ಕರ್ನಾಟಕದ ನೆಲೆಯಲ್ಲಿ ಲಿಂಗಾಯತರು ಕ್ರಮೇಣ ಬಿಜೆಪಿಯಿಂದ ದೂರವಾಗುತ್ತಿದ್ದಾರೆ. ಈ ಸಲ ಅದು ಇಪ್ಪತ್ತೋ ಇಪ್ಪತ್ತೈದು ಪರ್ಸೆಂಟ್ ಇರಬಹುದು. ಆದರೆ ಲಿಂಗಾಯತ ಮತ ಬ್ಯಾಂಕಿನ ಕೊರತೆಯನ್ನು ಒಕ್ಕಲಿಗ ಮತ ಬ್ಯಾಂಕ್ ಭರ್ತಿ ಮಾಡಿತು.
ಲಿಂಗಾಯತ ಮತ ಬ್ಯಾಂಕು ಕೊಟ್ಟ ಹೊಡೆತವನ್ನು ಹಳೆ ಮೈಸೂರು ಪಾಕೀಟಿನಲ್ಲಿ ಜೆಡಿಎಸ್‌ನಿಂದಾಗಿ ನಾವು ಜೀರ್ಣ ಮಾಡಿಕೊಂಡೆವು. ಆದರೆ ಈ ಹೊಡೆತವನ್ನು ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ತಡೆದುಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿಕ್ಕೋಡಿಯಂತಹ ಕ್ಷೇತ್ರಗಳಲ್ಲಿ ಇದೇ ಕಾರಣಕ್ಕಾಗಿ ನಾವು ಸೋತೆವು.
ಏನೇ ಇರಲಿ, ಜೆಡಿಎಸ್ ಜತೆಗಿನ ಮೈತ್ರಿ ನಮಗೆ ಅನುಕೂಲವಾಯಿತು. ಇದನ್ನು ನಾವು ಮರೆಯುವುದಿಲ್ಲ ಅಂತ ಮುಕ್ತವಾಗಿ ಹೇಳಿದ್ದಾರೆ.
ಅರ್ಥಾತ್, ಕರ್ನಾಟಕದ ನೆಲೆಯಲ್ಲಿ ಇನ್ನು ಮುಂದೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರಿಗೆ ಟಾಪ್ ಪ್ರಿಪರೆನ್ಸು ಸಿಗಲಿದೆಯಲ್ಲದೆ, ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಪಡೆಗೆ ತಾಖತ್ ಕೀ ದವಾ ಸಿಗುವುದು ನಿಶ್ಚಿತವಾಗಿದೆ.
ರೇಸಿಗೆ ಬಂದರು ಎಂ.ಬಿ.ಪಾಟೀಲ್
ಅಂದ ಹಾಗೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಲಿಂಗಾಯತ ಡಿಸಿಎಂ ಕೂಗು ಕೇಳತೊಡಗಿದೆ. ಕಾರಣ ಒಕ್ಕಲಿಗ ಪಾಳೇಪಟ್ಟಿನಲ್ಲಿ ಹೀನಾಯ ಸೋಲು ಅನುಭವಿಸಿದ ಪಕ್ಷಕ್ಕೆ ಲಿಂಗಾಯತರು ಆಸರೆಯಾಗಿದ್ದಾರೆ ಎಂಬುದೇ ಈ ಕೂಗಿನ ಮೂಲ.
ವಿಧಾನಸಭೆ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಪಾಕೀಟಿನಲ್ಲಿ ಪಕ್ಷಕ್ಕೆ ಗಣನೀಯ ಸೀಟುಗಳು ಬಂದಿದ್ದು ನಿಜ. ಆದರೆ ತದನಂತರದ ಬೆಳವಣಿಗೆಗಳು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಶಕ್ತಿಯನ್ನು ಕುಗ್ಗಿಸಿವೆ. ಲೋಕಸಭಾ ಚುನಾವಣೆಯ ಫಲಿತಾಂಶ ಇದಕ್ಕೆ ಸಾಕ್ಷಿ. ಅದಕ್ಕೆ ಪ್ರತಿಯಾಗಿ ನಾವು ಗೆದ್ದಿರುವ ಬೀದರ್, ಚಿಕ್ಕೋಡಿ, ಚಾಮರಾಜನಗರ, ದಾವಣಗೆರೆ, ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳದಂತಹ ಕ್ಷೇತ್ರಗಳಲ್ಲಿ ಲಿಂಗಾಯತ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ಇಲ್ಲಿ ನಮಗೆ ಅಹಿಂದ ಮತಗಳು ದೊಡ್ಡ ಮಟ್ಟದಲ್ಲಿ ಬಿದ್ದಿರುವುದೇನೋ ನಿಜ. ಆದರೆ ಒಂದು ಮಟ್ಟದಲ್ಲಿ ಲಿಂಗಾಯತ ಮತ ಬ್ಯಾಂಕು ನೀಡಿದ ಬೆಂಬಲ ನಮಗೆ ಪ್ಲಸ್ ಆಯಿತು.
ಹೀಗೆ ಒಂದು ಪ್ರಮಾಣದಲ್ಲಿ ಲಿಂಗಾಯತ ಮತಗಳು ಕಾಂಗ್ರೆಸ್ಸಿಗೆ ಬಂದಿರುವುದಕ್ಕೆ ಹಲವು ಕಾರಣಗಳಿವೆ. ಅದೆಂದರೆ ಮೋದಿಯವರ ವಿಷಯದಲ್ಲಿ ಲಿಂಗಾಯತರಿಗೆ ಮುಂಚಿನ ಆಕರ್ಷಣೆಯಿಲ್ಲ. ಇದೇ ರೀತಿ ಲಿಂಗಾಯತ ನಾಯಕತ್ವದ ವಿಷಯದಲ್ಲಿ ಯಡಿಯೂರಪ್ಪ ಅವರನ್ನು ಒಪ್ಪಿದಂತೆ ಆ ಸಮುದಾಯ ಇನ್ನೂ ವಿಜಯೇಂದ್ರ ಅವರನ್ನು ಒಪ್ಪಿಕೊಂಡಿಲ್ಲ.
ಈ ಅಂಶವನ್ನು ಗಮನಿಸಿ ನಾವು ಸರ್ಕಾರದ ಮಟ್ಟದಲ್ಲಿ ಲಿಂಗಾಯತರಿಗೆ ಶಕ್ತಿ ತುಂಬಬೇಕು. ಭವಿಷ್ಯದಲ್ಲಿ ಲಿಂಗಾಯತ ಮುಖ್ಯಮಂತ್ರಿಯನ್ನು ಮುಂದಿಟ್ಟುಕೊಳ್ಳುವುದು ಅನಿವಾರ್ಯವಾದರೂ ಸದ್ಯದ ಸ್ಥಿತಿಯಲ್ಲಿ ಆ ಸಮುದಾಯಕ್ಕೆ ಕನಿಷ್ಟ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಬೇಕು.
ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೋಡಿದರೆ ಒಕ್ಕಲಿಗರು ದೇವೇಗೌಡ -ಕುಮಾರಸ್ವಾಮಿ ಜತೆ ಸಾಲಿಡ್ಡಾಗಿ ನಿಂತಿರುವುದು ಸ್ಪಷ್ಟ. ಇಂತಹ ಪರಿಸ್ಥಿತಿಯಲ್ಲಿ ಅಹಿಂದ ಪ್ಲಸ್ ಒಕ್ಕಲಿಗ ಕಾಂಬಿನೇಶನ್ನಿನಲ್ಲಿ ನಾವು ಮುಂದುವರಿಯುವುದು ಕಷ್ಟ. ಇದರ ಬದಲಿಗೆ ಅಹಿಂದ ಪ್ಲಸ್ ಲಿಂಗಾಯತ ಕಾಂಬಿನೇಶನ್ನಿನ ಜತೆ ಹೋದರೆ ಮಾತ್ರ ನಮಗೆ ಭವಿಷ್ಯ ಎಂಬುದು ರಾಜ್ಯ ಕಾಂಗ್ರೆಸ್ ಪಾಳಯದ ಮಾತು.
ಯಾವಾಗ ಈ ಮಾತು ಶುರುವಾಯಿತೋ, ಇದಾದ ನಂತರ ಡಿಸಿಎಂ ಹುದ್ದೆಯ ರೇಸಿನಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರ ಹೆಸರು ಕಾಣಿಸಿಕೊಂಡಿದೆ. ಅಂದ ಹಾಗೆ ಸರ್ಕಾರದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಾಗಿ ರೇಸು ಶುರುವಾಗಿ ಹಲವು ಕಾಲವೇ ಕಳೆದಿದೆ. ಮತ್ತು ರೇಸಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಹೆಸರುಗಳು ಈಗಾಗಲೇ ಓಡುತ್ತಿವೆ.
ಈ ಪಟ್ಟಿಗೆ ಸಚಿವ ಎಂ.ಬಿ.ಪಾಟೀಲರ ಹೆಸರು ಸೇರಿಕೊಂಡಿದೆ ಎಂಬುದೇ ಸದ್ಯದ ವಿಶೇಷ.
ಸಚಿವ ಮಹದೇವಪ್ಪ ಸಕ್ಸಸ್ ಸ್ಟೋರಿ
ಈ ಮಧ್ಯೆ ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ವಿಷಯದಲ್ಲಿ ಕಾಂಗ್ರೆಸ್ ವರಿಷ್ಟರು ಖುಷಿಯಾಗಿದ್ದಾರಂತೆ. ಕಾರಣ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಅವರು ಸಾಧಿಸಿ ತೋರಿಸಿದ ಸೋಷಿಯಲ್ ಎಂಜಿನಿಯರಿಂಗ್ ವರ್ಕು.
ಅಂದ ಹಾಗೆ ಹಳೆ ಮೈಸೂರು ಭಾಗದ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಜಯ ಗಳಿಸಿದ್ದು ಚಾಮರಾಜನಗರ ಮತ್ತು ಹಾಸನ ಕ್ಷೇತ್ರಗಳಲ್ಲಿ ಮಾತ್ರ. ಆದರೆ ಸೋಷಿಯಲ್ ಎಂಜಿನಿಯರಿಂಗ್ ಮೂಲಕ ಗೆದ್ದಿದ್ದು ಚಾಮರಾಜನಗರದಲ್ಲಿ ಮಾತ್ರ. ಉಳಿದಂತೆ ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ರೇವಣ್ಣ ಕುಟುಂಬದ ವಿರುದ್ಧ ಇದ್ದ ವಿರೋಧ ಮತ್ತು ಪ್ರಜ್ವಲ್ ರೇವಣ್ಣ ಎಪಿಸೋಡು ಕಾರಣ.
ಆದರೆ ಚಾಮರಾಜನಗರದಲ್ಲಿ ಸಚಿವರಾದ ಡಾ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಗೆಲುವು ಗಳಿಸಲು ಪಕ್ಕಾ ಸೋಷಿಯಲ್ ಎಂಜಿನಿಯರಿಂಗ್ ವರ್ಕೇ ಕಾರಣ. ಅಂದ ಹಾಗೆ ಕ್ಷೇತ್ರದಲ್ಲಿ ಲಿಂಗಾಯತರು ಸಾಲಿಡ್ಡಾಗಿದ್ದರೂ ಅಹಿಂದ ಪ್ಲಸ್ ಲಿಂಗಾಯತ ಮತಗಳು ಕ್ರೋಡೀಕರಣಗೊಳ್ಳಲು, ಆ ಮೂಲಕ ಸುನೀಲ್ ಬೋಸ್ ಗೆಲ್ಲಲು ಮಹದೇವಪ್ಪ ಕಾರಣರಾದರು. ಪರಿಣಾಮ ಈ ಹಿಂದೆ ಬಿಜೆಪಿಯ ಕೈಲಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರೀ ಅಂತರದಿಂದ ಗೆಲುವು ಗಳಿಸಿತು.
ಈ ಸಲ ಚಾಮರಾಜನಗರದಲ್ಲಿ ಡಾ.ಮಹದೇವಪ್ಪ ಅವರು ಸಾಧಿಸಿದ ಸೋಷಿಯಲ್ ಎಂಜಿನಿಯರಿಂಗ್ ಕೆಲಸ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸಾಧಿತವಾಗಿದ್ದರೂ, ಹಳೆ ಮೈಸೂರು ಭಾಗದಲ್ಲಿ ಡಾ.ಮಹದೇವಪ್ಪ ಅವರು ಮಾಡಿದ ಕೆಲಸ ಉಳಿದವರಿಗೆ ಸಾಧ್ಯವಾಗಲಿಲ್ಲ ಎಂಬುದು ವರಿಷ್ಟರ ನೋವು.
ಹೀಗಾಗಿ ದಿಲ್ಲಿಯಲ್ಲಿ ಕರ್ನಾಟಕದ ವಿಷಯ ಪ್ರಸ್ತಾಪವಾದಾಗಲೆಲ್ಲ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು, ಚಾಮರಾಜನಗರದಲ್ಲಿ ನಡೆದ ಸೋಷಿಯಲ್ ಎಂಜಿನಿಯರಿಂಗ್ ಬೇರೆ ಕಡೆ ಸಾಧ್ಯವಾಗಬೇಕಿತ್ತು ಎಂದು ಹೇಳತೊಡಗಿದ್ದಾರಂತೆ.
ಆರ್.ಟಿ.ವಿಠ್ಠಲಮೂರ್ತಿ