ಕರ್ನಾಟಕದ ಐವರು ಸಚಿವರಿಗೂ ಪ್ರಮುಖ ಖಾತೆ ಹಂಚಿಕೆ
ಬೆಂಗಳೂರು: ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆಯಂತಹ ದೊಡ್ಡ ಹಾಗೂ ಗೌರವಯುತವಾದ ಖಾತೆಯ ಹೊಣೆಗಾರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿದ್ದಾರೆ.
ಮೂರನೇ ಬಾರಿಗೆ ಪ್ರಧಾನಿಯಾಗಿ ಭಾನುವಾರವಷ್ಟೇ ಅಧಿಕಾರ ವಹಿಸಿಕೊಂಡ ಮೋದಿ ಅವರು, ತಮ್ಮ ಸಂಪುಟದ 72 ಮಂದಿ ಸದಸ್ಯರಿಗೂ ಇಂದು ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ಬೃಹತ್ ಕೈಗಾರಿಕಾ ಖಾತೆ ನೀಡುವುದರ ಜತೆಗೆ ಸಂಪುಟ ಸಭೆಯಲ್ಲಿ ಪ್ರಧಾನಿ ಅವರ ಬಲಭಾಗದ ಐದನೇ ಆಸನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಸೀತರಾಮನ್ ಅವರಿಗೆ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆ ಜವಾಬ್ದಾರಿ ವಹಿಸಿದ್ದಾರೆ.
ಪ್ರಹ್ಲಾದ್ ಜೋಶಿ ಅವರಿಗೆ ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಹೊಣೆಗಾರಿಕೆ ನೀಡಿದ್ದಾರೆ.
ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಅವರಿಗೂ ಜಲಶಕ್ತಿ ಹಾಗೂ ರೈಲ್ವೆಯಂತಹ ಬೃಹತ್ ಇಲಾಖೆಯ ರಾಜ್ಯ ಖಾತೆಯನ್ನು ನೀಡಲಾಗಿದೆ.
ಅದೇ ರೀತಿ ರಾಜ್ಯ ಸಚಿವೆ ಶೋಭ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆಯ ಹೊಣೆಗಾರಿಕೆಯನ್ನು ಪ್ರಧಾನಿ ಅವರು ವಹಿಸಿಕೊಟ್ಟಿದ್ದಾರೆ.
ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಐವರು ಸಚಿವರಿಗೂ ಪ್ರಧಾನಿ ಅವರು ದೊಡ್ಡ ಖಾತೆಗಳ ಹೊಣೆಗಾರಿಕೆ ನೀಡುವ ಮೂಲಕ ಕರ್ನಾಟಕದ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ನಿರ್ಮಲಾ ಸೀತರಾಮನ್ ಹಾಗೂ ಪ್ರಹ್ಲಾದ್ ಜೋಶಿ ಅವರು ಹಿಂದಿನ ಸರ್ಕಾರದಲ್ಲೂ ಸಂಪುಟದರ್ಜೆ ಸಚಿವರಾಗಿ ಹಾಗೂ ಶೋಭಾ ಕರಂದ್ಲಾಜೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಕುಮಾರಸ್ವಾಮಿ ಹಾಗೂ ಸೋಮಣ್ಣ ಅವರು ಇದೇ ಮೊದಲ ಬಾರಿಗೆ ಕ್ರಮವಾಗಿ ಕೇಂದ್ರ ಸಂಪುಟ ದರ್ಜೆ ಹಾಗೂ ರಾಜ್ಯ ಸಚಿವರಾಗಿ ಅಧಿಕಾರಿ ವಹಿಸಿಕೊಂಡಿದ್ದಾರೆ.