ಬೆಂಗಳೂರು:ಲೋಕಸಭಾ ಚುನಾವಣೆ ಸೋಲಿನ ಬಗ್ಗೆ ಶಾಸಕರು ಮಾತನಾಡದೆ ಮರ್ಯಾದೆಯಿಂದ ಬಾಯಿ ಮುಚ್ಚಿಕೊಂಡು ಇರುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಜನರು ತೀರ್ಪು ಕೊಟ್ಟಿದ್ದಾರೆ, ಅದನ್ನು ಸ್ವೀಕರಿಸಲೇಬೇಕು, ತೀರ್ಪಿನ ಮೇಲೆ ಸಾರ್ವಜನಿಕವಾಗಿ ಪರಾಮರ್ಶೆ ಮಾಡುವುದರಿಂದ ಯಾವುದೇ ಲಾಭವಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಶಾಸಕರು ಮತ್ತು ಮುಖಂಡರು ಚುನಾವಣಾ ಫಲಿತಾಂಶದ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಸಾರ್ವಜನಿಕವಾಗಿ ಮಾತನಾಡಬಾರದು
ಇನ್ನು ಮುಂದೆ ಈ ವಿಷಯವಾಗಿ ಯಾರೂ ಸಾರ್ವಜನಿಕವಾಗಿ ಮಾತನಾಡಬಾರದೆಂದು ಮನವಿ ಮಾಡಿಕೊಳ್ಳುತ್ತೇನೆ.
ನಾವು ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳ ಪೈಕಿ 14 ರಿಂದ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು, ಆದರೆ ಕಾರಣಾಂತರಗಳಿಂದ ಇದು ಸಾಧ್ಯವಾಗಲಿಲ್ಲ, ಜನ ತೀರ್ಪು ನೀಡಿದ್ದಾರೆ.
ಸೋಲಿನ ಬಗ್ಗೆ ವಿಮರ್ಶೆ ಮಾಡಿ ವರದಿ ನೀಡುವಂತೆ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆದೇಶ ಮಾಡಿದ್ದಾರೆ.
ಹೊಣೆ ಹೊತ್ತವರಿಂದ ವರದಿ
ಚುನಾವಣೆ ಹೊಣೆ ಹೊತ್ತವರಿಂದ ವರದಿ ಕೇಳುತ್ತೇವೆ, ಅದಕ್ಕಾಗಿ ಒಂದೆರಡು ದಿನದಲ್ಲೇ ಹಿರಿಯ ನಾಯಕರ ಸಭೆ ಕರೆಯಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಎಲ್ಲಿ ಪ್ರಚಂಡ ಜಯ ಗಳಿಸಿದ್ದೆವೋ, ಈ ಚುನಾವಣೆಯಲ್ಲಿ ಆ ಸ್ಥಳಗಳಲ್ಲೇ ಭಾರೀ ಸೋಲು ಕಂಡಿದ್ದೇವೆ.
ಕ್ಷೇತ್ರದ ಚುನಾವಣಾ ಹೊಣೆಗಾರಿಕೆ ವಹಿಸಿಕೊಂಡವರು ಸೋಲಿನ ಕಾರಣಗಳನ್ನು ಕೊಡಬೇಕಿರುವುದು ಅವರ ಜವಾಬ್ದಾರಿ, ಕೊಡುತ್ತಾರೆ.
ಎಲ್ಲಿ ಎಡವಿದ್ದೇವೆ ತಿಳಿಸಬೇಕು
ನಮಗೆ ವರದಿ ನೀಡುವ ಮೊದಲು ಕಾರ್ಯಕರ್ತರು, ಮುಖಂಡರು ಮತ್ತು ಸಾರ್ವಜನಿಕರ ಅಭಿಪ್ರಾಯ ಪಡೆದು ಎಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿಸಬೇಕು ಎಂದರು.
ನನ್ನ ಕ್ಷೇತ್ರದ ಕೆಲವು ಮುಖಂಡರ ವ್ಯಾಪ್ತಿಯಲ್ಲೇ ಹಿನ್ನಡೆಯಾಗಿದೆ, ಈಗ ಅದರ ಬಗ್ಗೆ ದೂಷಿಸುತ್ತಾ ಕುಳಿತರೆ ಆಗದು, ಆಗಿರುವ ತಪ್ಪನ್ನು ತಿದ್ದಿಕೊಳ್ಳಬೇಕು, ಅದಕ್ಕಾಗಿಯೇ ವರಿಷ್ಠರು ವರದಿ ಕೇಳಿದ್ದಾರೆ.
ಮುಂದೆ ಜಿಲ್ಲಾ, ತಾಲ್ಲೂಕು ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿವೆ, ಈ ವೇಳೆಗೆ ನಮ್ಮ ತಪ್ಪನ್ನು ನಾವು ತಿದ್ದಿಕೊಳ್ಳಬೇಕು.
ದೋಷಾರೋಪಣೆಯಿಂದ ಪ್ರಯೋಜನವಿಲ್ಲ
ತಪ್ಪು ತಿದ್ದಿಕೊಳ್ಳುವ ಬದಲು ದೋಷಾರೋಪಣೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ, ನನ್ನ ಬಳಿ ಯಾವುದೇ ಮುಖಂಡರು ಚುನಾವಣೆಯಲ್ಲಿ ಹಿನ್ನಡೆ ಆಯಿತು ಎಂದು ಹೇಳಿಲ್ಲ ಮತ್ತು ದೂರು ನೀಡಿಲ್ಲ.
ಆದರೂ ಜನರ ತಿರಸ್ಕಾರಕ್ಕೆ ಕಾರಣ ಏನಿರಬಹುದು ಎಂಬುದನ್ನು ತಿಳಿಯುವುದು ನಮಗೆ ಅಗತ್ಯವಿದೆ, ಅದಕ್ಕಾಗಿ ಉಸ್ತುವಾರಿಗಳು ಪೂರ್ಣ ವರದಿ ನೀಡಬೇಕು ಎಂದರು.