ಬೆಂಗಳೂರು:ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲೇ ಗತಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 10 ದಿನಗಳ ಎಸ್‌ಐಟಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಜೂನ್ 24ರ ವರೆಗೆ ಅಂದರೆ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆದೇಶದ ನಂತರ ಪ್ರಜ್ವಲ್‌ನನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.
ನಿವಾಸದಲ್ಲಿ ಸ್ಥಳ ಮಹಜರು
ಇಂದು ಬಸವನಗುಡಿಯ ಅವರ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಬಳಿಕ ಪ್ರಜ್ವಲ್ ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಕರೆತರಲಾಯಿತು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರು. ಪ್ರಜ್ವಲ್ ಅವರನ್ನು ಉದ್ದೇಶಿಸಿ, ಕಸ್ಟಡಿ ಅವಧಿಯಲ್ಲಿ ಏನಾದರೂ ತೊಂದರೆ ಆಯಿತೇ ಎಂದು ಪ್ರಶ್ನಿಸಿದಾಗ, ಅದಕ್ಕೆ ಅವರು ಇಲ್ಲ ಎಂದು ಉತ್ತರಿಸಿದರು.
ಮುಚ್ಚಿದ ಲಕೋಟೆ
ತದನಂತರ ಈ ಪ್ರಕರಣದಲ್ಲಿ ನಮಗೆ ಪ್ರಜ್ವಲ್ ಕಸ್ಟಡಿ ಅವಶ್ಯಕತೆ ಇಲ್ಲ ಎಂದು ಎಸ್‌ಐಟಿ ಪರ ವಕೀಲರು ನ್ಯಾಯಾಲಯದ ಮುಂದೆ ಸ್ಪಷ್ಟನೆ ನೀಡಿ ಮುಚ್ಚಿದ ಲಕೋಟೆಯೊಂದನ್ನು ನೀಡಿದರು.
ಲಕೋಟೆ ಪಡೆದ ನಂತರ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಿ, ಇದಕ್ಕೆ ನಿಮ್ಮ ತಕರಾರು ಏನಾದರೂ ಇದೆಯೇ ಎಂದು ಪ್ರಜ್ವಲ್ ವಕೀಲರನ್ನು ಪ್ರಶ್ನಿಸಿದಾಗ, ಇಲ್ಲ ಎಂದು ಉತ್ತರಿಸಿದರು.