ಉಕ್ಕು ಮತ್ತು ಬೃಹತ್ ಕೈಗಾರಿಕೆ ಅಧಿಕಾರಿಗಳೊಂದಿಗೆ ಸಭೆ
ಬೆಂಗಳೂರು: ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆಯ ಕೇಂದ್ರ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ನವದೆಹಲಿಯ ಉದ್ಯೋಗ ಮಂತ್ರಾಲಯದ ತಮ್ಮ ಕಚೇರಿಗೆ ಆಗಮಿಸಿದ ಕುಮಾರಸ್ವಾಮಿ ಅವರು, ತಮ್ಮ ಕುಟುಂಬದ ಸದಸ್ಯರು ಹಾಗೂ ಪಕ್ಷದ ಮುಖಂಡರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಸಚಿವರಾಗಿ ಕಾರ್ಯಾರಂಭ ಮಾಡಿದರು.
ಪುತ್ರ ಅಧಿಕಾರ ಸ್ವೀಕರಿಸುವುದನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೆಂಗಳೂರಿನಲ್ಲೆ ಕುಳಿತು ವರ್ಚುವಲ್ ಮೂಲಕ ವೀಕ್ಷಿಸಿದರು.
ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕಾರಕ್ಕೂ ಮುನ್ನ ಕಳೆದೆರಡು ದಿನಗಳಿಂದ ದೆಹಲಿಯಲ್ಲಿರುವ ದೇವೇಗೌಡರ ನಿವಾಸದಲ್ಲಿ ತಮ್ಮ ಎರಡೂ ಖಾತೆಗಳಿಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು.
ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ತಮಗಿರುವ ಅನುಭವವನ್ನು ಬಳಕೆ ಮಾಡಿಕೊಂಡು ಉಭಯ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.
ಕಳೆದ ಭಾನುವಾರವಷ್ಟೇ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಕುಮಾರಸ್ವಾಮಿ, ಶುಕ್ರವಾರ ಬೆಂಗಳೂರಿಗೆ ಮರಳಲಿದ್ದಾರೆ. ಕೇಂದ್ರ ಸಚಿವರಾದ ನಂತರ ಮೊದಲ ಬಾರಿ ಬೆಂಗಳೂರಿಗೆ ನೀಡುತ್ತಿರುವ ಭೇಟಿ ಇದಾಗಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಪಕ್ಷದ ಕಚೇರಿಗೆ ತೆರಳಲಿದ್ದಾರೆ. ಬಳಿಕ ಅವರು ತಂದೆ-ತಾಯಿ ಅವರ ಆಶೀರ್ವಾದ ಪಡೆಯಲಿದ್ದಾರೆ.
ನಂತರ ಅವರು ಇಂತಹ ಅಧಿಕಾರ ನೀಡಿರುವ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಲು ಮಂಡ್ಯಕ್ಕೆ ತೆರಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.